ಕರ್ನಾಟಕ

ತಾರಿಣಿ ಮದುವೆ ಮಾಡಿಸಿದ ಪ್ರಭುಶಂಕರ್ ‘ಲಿಂಗೌ’ ಆದ ಕಥೆ!

Pinterest LinkedIn Tumblr


ಡಾ. ಪ್ರಭುಶಂಕರ್ ಕುವೆಂಪು ಅವರಿಗೆ ಪರಮಾಪ್ತರು. ಇದು ಲೋಕಕ್ಕೆ ಗೊತ್ತಿರುವ ಸಂಗತಿ. ಆದರೆ ಯಾಕೆ ಅವರು ಅಷ್ಟು ಆಪ್ತರು ಕುವೆಂಪು ಅವರಿಗೆ ಅನ್ನುವುದಕ್ಕೂ ಒಂದು ದಾಖಲೆ ಬೇಡವೇ? ನಾನು, ಪ್ರಭು ಶಂಕರ್ ಅವರು ಕುವೆಂಪು ಅವರ ಮನೆಯಲ್ಲಿ ಬಹಳಷ್ಟು ಬಹಳ ಕಾಲ ಇರುತ್ತಿದ್ದೆವು. ನಾನಾಗಲೀ, ಪ್ರಭುಶಂಕರ್ ಆಗಲೀ ಮೂಲತಃ ವಿನೋದ ಪ್ರವೃತ್ತಿಯವರು. ಕುವೆಂಪು ಅವರೂ ಹಾಸ್ಯಪ್ರಿಯರು. ಯಾರದೇ ಜೀವನದಲ್ಲಿ ಅದರಲ್ಲೂ ಹೆತ್ತವರಿಗೆ ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಆಗಿಲ್ಲ ಅಂತ ಆದರೆ ಅದರಂಥ ಚಿಂತೆ ಇನ್ನೊಂದಿರಲಾರದು. ಕುವೆಂಪು ಅವರಿಗೂ ಅಂತಹ ಒಂದು ಚಿಂತೆ ಕಾಡುತ್ತಿತ್ತು. ತಾರಿಣಿದೇವಿ ಅವರದ್ದು ಮದುವೆ ಆಗುವ ಹೊತ್ತಿನಲ್ಲಿ ಮದುವೆ ಆಗಿರಲಿಲ್ಲ. ಈ ಚಿಂತೆಯನ್ನು ಕುವೆಂಪು ಅವರಿಂದ ದೂರ ಮಾಡಿದವರು ಪ್ರಭುಶಂಕರ್ ಅವರು.

ಚಿದಾನಂದ ಗೌಡ್ರು ತಾರಿಣಿ ಅವರ ಪತಿ, ಜೆ.ಸಿ. ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದು, ನಂತರ ಉಪಕುಲಪತಿಗಳೂ ಆದರು. ಇವರು ಸುಳ್ಯದ ಕೊಳಂಬೆ ಪುಟ್ಟಣ್ಣಗೌಡ ಎಂಬವರ ಮಗ. ಕೊಳಂಬೆ ಪುಟ್ಟಣ್ಣಗೌಡರು ಬಹುದೊಡ್ಡ ಸಾಹಿತಿ, ಪ್ರಭುಶಂಕರ್ ಅವರಿಗೆ ತುಂಬಾ ಆಪ್ತರು. ಪ್ರಭು ಶಂಕರ್ ಪುಟ್ಟಣ್ಣ ಗೌಡರೊಂದಿಗೆ ಮಾತನಾಡಿ, ಗಂಡು ಗೊತ್ತುಮಾಡಿ ತಾರಿಣಿ ಅವರ ಮದುವೆ ಮಾಡಿಸಿದರು. ಕುವೆಂಪು ಅವರು ಸರಳ ವಿವಾಹ ಪ್ರತಿಪಾದಕರು. ಮಂತ್ರಮಾಂಗಲ್ಯ. ತಾರಿಣಿ- ಚಿದಾನಂದ ಗೌಡರ ಮದುವೆಗೆ ಕುವೆಂಪು ಕರೆದದ್ದು ಕೇವಲ ಐದೇ ಜನರನ್ನು ಮಾತ್ರ. ದೇ.ಜ.ಗೌ., ಪ್ರಭುಶಂಕರ್, ಉ.ಕ. ಸುಬ್ರಾಯ ಆಚಾರ್, ಸೃಜನ ಮತ್ತು ನಾನು. ಗಂಡಿನ ಕಡೆ ಯವರಿಗೆ ನೀವು ಒಂದು ಅಂಬಾಸಿಡರ್ ಕಾರಿನಲ್ಲಿ ಬನ್ನಿ ಅಂತ ಕುವೆಂಪು ಹೇಳಿದ್ದರು. ಕಾರಣ ಆ ಕಾರಿ ನಲ್ಲಿ ಹಿಡಿಯುವುದೂ ಆರರಿಂದ ಎಂಟು ಜನ. ನಮಗೆಲ್ಲ ಒಂದು ಲಾಡು, ಒಂದು ಹಣ್ಣನ್ನು ಕವರ್‌ಗೆ ಹಾಕಿ ಕೊಟ್ಟಿದ್ದರು. ಆ ಮದುವೆಯನ್ನು ಮಾಡಿಸಿ ದವರು ಪ್ರಭುಶಂಕರ್.

ಕುವೆಂಪು ಅವರ ಶ್ರೀಮತಿಯವರು ತೀರಿಕೊಂಡ ಮೇಲೆ ಅವರನ್ನ ಅತ್ಯಂತ ತಾಯಿ ಯಂತೆ ನೋಡಿಕೊಂಡದ್ದು ತಾರಿಣಿ, ಹೆತ್ತ ತಂದೆಗಿಂತ ಹೆಚ್ಚು ಅಕ್ಕರೆ, ಗೌರವ, ಆದರದಿಂದ ನೋಡಿಕೊಂಡವರು ಚಿದಾನಂದ ಗೌಡರು. ಕುವೆಂಪು ಅವರ ಬಗ್ಗೆ ಚಿದಾನಂದ ಗೌಡರಿಗೆ ಅಪಾರ ಭಯ, ಭಕ್ತಿ. ತುಂಬಾ ಸಾತ್ವಿಕ, ಸಾಧು ವ್ಯಕ್ತಿತ್ವ. ಇಂಥ ಅಳಿಯನನ್ನ ಆರಿಸಿದವರು ಡಾ. ಪ್ರಭುಶಂಕರ್. ನಿಂತು, ಓಡಾಡಿ ಮದುವೆ ಮಾಡಿಸಿದವರು ಪ್ರಭುಶಂಕರ್. ಹೀಗಾಗಿ ಕುವೆಂಪು ಅವರಿಗೆ ಅಂತರಂಗದ ಶಿಷ್ಯ ಅಷ್ಟೇ ಅಲ್ಲ, ಕಷ್ಟಸುಖಗಳಲ್ಲಿ ಕೂಡ ಭಾಗಿಯಾದವರು.

ಲಿಂಗೌ
ಆಮೇಲೆ ಪ್ರಭುಶಂಕರ್ ಅವರದ್ದು ವಿವಾಹ. ಇವರು ಲಿಂಗಾಯತರು. ಅವರ ಹೆಂಡತಿ ಗೌಡ್ರು. ಅವರ ಊರು ನಮ್ಮೂರು ಪಕ್ಕ. ಶಾಂತಾ ಪ್ರಭುಶಂಕರ್. ಕುವೆಂಪು ಅವರಿಗಂತೂ ಅಂತ ರ್ಜಾತಿ ವಿವಾಹ ಅಂದರೆ ಬಲು ಇಷ್ಟ. ನನ್ನ ಮಕ್ಕಳದ್ದೂ ಇಂಟರ್‌ಕಾಸ್‌ಟ್ ಮ್ಯಾರೇಜ್. ಒಮ್ಮೆ ಪ್ರಭುಶಂಕರ್ ಅವರಲ್ಲಿ ಕೇಳಿದೆ, ನಿಮಗೆ ಗೌಡ್ರು- ಲಿಂಗಾಯಿತರು ಸಮಸ್ಯೆ ಆಗಿಲ್ವಾ ಅಂತ. ‘ವಸಂತ ಕುಮಾರ್, ನನಗೆ ಸಮಸ್ಯೆ ಆಗಿಲ್ಲ. ಆದರೆ ಈ ಸಮಾಜಕ್ಕೆ ಸಮಸ್ಯೆ ಆಯ್ತು ನೋಡಿ. ಸಾಮಾನ್ಯರು ಬಿಡಿ, ಈ ಬುದ್ಧಿಜೀವಿಗಳು ಅನ್ನಿಸಿಕೊಂಡವರೂ ನನ್ನಲ್ಲಿ ಕೇಳಲು ಶುರುಮಾಡಿದರು, ಮಕ್ಕಳನ್ನು ಶಾಲೆಗೆ ಸೇರಿಸುವಾಗ ಯಾವ ಜಾತಿ ಅಂತ ದಾಖಲು ಮಾಡ್ತೀರಿ ಅಂತ. ಆಗ ಅವರಿಗೆ ಹೇಳಿದೆ, ನನಗೆ ಅದೊಂದು ದೊಡ್ಡ ಸಮಸ್ಯೆಯೇ ಅಲ್ಲ, ನಾನಲ್ಲಿ ‘ಲಿಂಗೌ’ ಅಂತ ಹಾಕ್ತೀನಿ. ಲಿಂಗಾಯಿತ ಗೌಡ!’ ಇಂತಹದ್ದೊಂದು ಘಟನೆ ನನ್ನ ಕುಟುಂಬದಲ್ಲೂ ಬಂತು.

ನನ್ನ ಸೊಸೆ ತಮಿಳು ಬ್ರಾಹ್ಮಣಳು. ಮಗ ಪ್ರೀತಿಸಿ ಮದುವೆ ಆದ. ಅವರಿಗೆ ಮಗು ಆಯ್ತು. ಮಗುವನ್ನ ಶಾಲೆಗೆ ಸೇರಿಸುವಾಗ ಬೆಂಗಳೂರಿನಿಂದ ಫೋನ್ ಮಾಡಿದ್ಲು, ಯಾವ ಜಾತಿ ಅಂತ ಬರೆಸಬೇಕು ಅಂತ ಕೇಳ್ತಿದ್ದಾರೆ, ಏನ್ ಬರೆಯಲಿ ಅಂತ ಕೇಳಿದ್ಲು. ‘ಗೌಬ್ರಾ’ ಅಂತ ಹೇಳಮ್ಮಾ. ಗೌಡ ಬ್ರಾಹ್ಮಣ. ಹೆಡ್‌ಮಾಸ್ಟರ್ ಜಾತಿ ಲಿಸ್ಟ್ ತೆಗೆದು ನೋಡಿ, ‘ಗೌಬ್ರಾ’ ಅನ್ನುವ ಜಾತಿ ಇಲ್ವಲ್ಲಾ ಅಂದಿದ್ದಾರೆ. ನನಗೆ ಮತ್ತೆ ಫೋನ್, ಅಂಕಲ್, ‘ಗೌಬ್ರಾ’ ಜಾತಿ ಇಲ್ವಂತೆ. ನಾನಾಗ ಅಂದೆ, ಸಂವಿಧಾನದಲ್ಲಿದೆ ಅಂತ ಹೇಳಮ್ಮಾ. ಇವಳು ಹೀಗೆಂದಾಗ ಹೆಡ್‌ಮಾಸ್ಟರ್, ಡಿಡಿಪಿಐಗೆ ಫೋನ್ ಮಾಡಿದ್ದಾರೆ. ಡಿಡಿಪಿಐ, ಸಂವಿಧಾನದಲ್ಲಿದೆ ಅಂತ ಹೇಳಿದ್ದಕ್ಕೆ, ಇಲ್ಲ ಅಂದರೆ ದಡ್ಡನಾಗುತ್ತೇನೆ ಅಂತ ‘ಹೌದೌದು, ಚಿಕ್ಕಮಗಳೂರು ಕಡೆ ‘ಗೌಬ್ರಾ’ ಅಂತಿಟ್ಕತಾರೆ. ಸೇರಿಸಿಕೊಳ್ಳಿ’ ಅಂತ ಹೇಳಿದ್ದಾರೆ. ಹೀಗೆ ನನ್ನ ಮೊಮ್ಮಕ್ಕಳ ‘ಗೌಬ್ರಾ’ಕ್ಕೆ ಪ್ರಭುಶಂಕರ್ ‘ಲಿಂಗೌ’ ಪ್ರೇರಣೆ.

Comments are closed.