ಕರ್ನಾಟಕ

ಪೌರ ಕಾರ್ಮಿಕರೊಂದಿಗೆ ಬಿಎಸ್‌ವೈ ಸಹಭೋಜನ​​​​​​​

Pinterest LinkedIn Tumblr


ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಶನಿವಾರ ತಮ್ಮ ನಿವಾಸದಲ್ಲಿ 25ಕ್ಕೂ ಹೆಚ್ಚು ಪೌರ ಕಾರ್ಮಿಕರೊಂದಿಗೆ ಸಹ ಭೋಜನ ಸವಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಇನ್ನು ಮುಂದೆ ಪ್ರತಿ ವರ್ಷ ಅಂಬೇಡ್ಕರ್‌ ಜಯಂತಿಯಂದು ಪೌರ ಕಾರ್ಮಿಕರೊಂದಿಗೆ ಸಹ ಭೋಜನ ನಡೆಸಲು ತೀರ್ಮಾನಿಸಿರುವುದಾಗಿ ಪ್ರಕಟಿಸಿದರು.

ರಾಧಾಕೃಷ್ಣ ವಾರ್ಡ್‌ನ 25ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ತಮ್ಮ ಡಾಲರ್ ಕಾಲೋನಿ ನಿವಾಸಕ್ಕೆ ಆಹ್ವಾನಿಸಿ ಸ್ವತಃ ತಾವೇ ಬಡಿಸಿ ಭೋಜನ ನೀಡಿ ಉಪಚರಿಸಿದರು. ಅವರೊಂದಿಗೆ ಶಾಸಕ ವೈ.ಎ.ನಾರಾಯಣಸ್ವಾಮಿ ಕೂಡ ಭೋಜನ ಸವಿದರು.
ಹೋಳಿಗೆ, ಚಿತ್ರಾನ್ನ, ಪೂರಿ, ಸಾಗು, ಎರಡು ಬಗೆಯ ಪಲ್ಯ, ಕೋಸಂಬರಿ, ಪಾಯಸ, ಹಪ್ಪಳ, ಅನ್ನ ಸಾಂಬಾರ್‌, ರಸಂ, ಮಜ್ಜಿಗೆ ಸಹಿತ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ಅವರು ಬಡಿಸಿ ಉಪಚರಿಸಿದರು. ಪೌರ ಕಾರ್ಮಿಕರಿಗೆ ಊಟ ಬಡಿಸುತ್ತಲೇ ಪೌರಕಾರ್ಮಿಕರ ಸಮಸ್ಯೆ, ಅಹವಾಲು ಆಲಿಸಿದರು. ನಾಲ್ಕು ತಿಂಗಳಿನಿಂದ ಪಾಲಿಕೆ ವೇತನ ನೀಡದಿರುವುದು ಸೇರಿದಂತೆ ತಮ್ಮ ಸಮಸ್ಯಗಳ ಬಗ್ಗೆ ಮಹಿಳಾ ಪೌರ ಕಾರ್ಮಿಕರು ಅಳಲು ತೋಡಿಕೊಂಡರು.

ಗುತ್ತಿಗೆ ಪೌರ ಕಾರ್ಮಿಕರ ಕಾಯಂ
ಭೋಜನದ ಬಳಿಕ ಪ್ರತಿಕ್ರಿಯಿಸಿದ ಬಿ.ಎಸ್‌.ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಕೂಡಲೇ 14 ಸಾವಿರ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಗುವುದು. ಆ ಮೂಲಕ ಪೌರ ಕಾರ್ಮಿಕರ ಮೇಲಿನ ಶೋಷಣೆ ತಪ್ಪಿಸಲು ಶಾಶ್ವತ ಕ್ರಮ ಕೈಗೊಂಡು ಅವರ ಸಮಸ್ಯೆ ನಿವಾರಿಸಲು ಬದ್ಧ ಎಂದು ಹೇಳಿದರು.

ಭೋಜನದ ವೇಳೆ ಪೌರ ಕಾರ್ಮಿಕರ ಸಂಕಷ್ಟ, ಸವಾಲಿನ ಜೀವನದ ಬಗ್ಗೆ ಕೇಳಿ ಕಣ್ಣೀರು ಬಂತು. ನಾಲ್ಕು ತಿಂಗಳನಿಂದ ವೇತನವನ್ನೇ ಸರ್ಕಾರ ನೀಡದಿರುವ ವಿಷಯ ಕೇಳಿ ನೋವಾಯಿತು. ಕಾಂಗ್ರೆಸ್‌ ಸರ್ಕಾರದ ಅವಧಿ ಮುಗಿಯುತ್ತಿದ್ದಂತೆ ದಿವಾಳಿಯಾಗಿದ್ದು, ಪೌರ ಕಾರ್ಮಿಕರಿಗೂ ವೇನತ ನೀಡಲಾಗದ ಹೀನಾಯ ಸ್ಥಿತಿ ತಲುಪಿರುವುದನ್ನು ತೋರಿಸುತ್ತದೆ ಎಂದು ಕಿಡಿ ಕಾರಿದರು.

ಒಂದು ತಿಂಗಳ ವೇತನ ನೀಡದಿದ್ದರೆ ಪೌರ ಕಾರ್ಮಿಕರು ಹೇಗೆ ಜೀವನ ನಡೆಸುತ್ತಾರೆ ಎಂಬುದನ್ನು ಯೋಚಿಸದ ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ. ಇಡೀ ಊರನ್ನು ಸ್ವತ್ಛಗೊಳಿಸುವವರ ಜೀವನವೇ ಸಂಕಷ್ಟದಲ್ಲಿದ್ದು, ಅವರ ಬದುಕಿನೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಬಿಜೆಪಿ ಸರ್ಕಾರ ಬರುತ್ತಿದ್ದಂತೆ ಪೌರ ಕಾರ್ಮಿಕರ ಎಲ್ಲ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಪ್ರತಿ ವರ್ಷ ಅಂಬೇಡ್ಕರ್‌ ಜಯಂತಿಯಂದು ಪೌರ ಕಾರ್ಮಿಕರೊಂದಿಗೆ ಸಹಭೋಜನ ನಡೆಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಪೌರ ಕಾರ್ಮಿಕರೊಂದಿಗೆ ಸಹಭೋಜನ ಕುರಿತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಟೀಕೆಗೆ ಉತ್ತರಿಸಿದ ಅವರು, “ಕುಮಾರಸ್ವಾಮಿಯವರ ಯಾವ ಹೇಳಿಕೆಗೂ ಉತ್ತರ ನೀಡದಿರಲು ನಿರ್ಧರಿಸಿದ್ದೇನೆ. ಜನ ಮೆಚ್ಚುವ ಕೆಲಸ ಮಾಡಿದ ತೃಪ್ತಿಯಿದ್ದು, ಅದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ ಪಿತೂರಿ
ಕಾಂಗ್ರೆಸ್ಸಿಗರು ಹಣ ಕೊಟ್ಟು ಪಿತೂರಿ ನಡೆಸಿ ಶ್ರೀರಾಮುಲು ವಿರುದ್ಧ ಗಲಾಟೆ ಮಾಡಿಸುತ್ತಿದ್ದಾರೆ. ಶಾಸಕ ತಿಪ್ಪೇಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿ ಮುಂದೆ ಸರ್ಕಾರ ಬಂದ ಮೇಲೆ ನೀಡುವ ಸ್ಥಾನಮಾನದ ಬಗ್ಗೆ ಚರ್ಚಿಸಲಾಗುವುದು. ತಿಪ್ಪೇಸ್ವಾಮಿಯವರು ಅವರು ಮೊಳಕಾಲ್ಮೂರು ಅಭ್ಯರ್ಥಿ ಶ್ರೀರಾಮುಲು ಗೆಲುವಿಗೆ ಶ್ರಮಿಸುತ್ತಾರೆ. ಟಿಕೆಟ್‌ ಹಂಚಿಕೆಯಲ್ಲಿ ಅಸಮಾಧಾನ ಸಹಜ. ಎಲ್ಲರೊಂದಿಗೆ ಚರ್ಚಿಸಿ ಸಮಾಧಾನ ಪಡಿಸಲಾಗುವುದು ಎಂದು ತಿಳಿಸಿದರು.

ಊಟ ಮಾಡಿದ್ದು ಖುಷಿಯಾಯಿತು
ನಾವು ಈವರೆಗೆ ಯಾವುದೇ ರಾಜಕಾರಣಿಗಳೊಂದಿಗೆ ಸಹ ಭೋಜನ ಮಾಡಿಲ್ಲ. ಮನೆಗೆ ಆಹ್ವಾನಿಸಿ ಆತಿಥ್ಯ ನೀಡಿ ಸಹಭೋಜನ ಮಾಡಿದ್ದಕ್ಕೆ ತುಂಬಾ ಖುಷಿಯಾಗಿದೆ. ಕಷ್ಟದ ಕೆಲಸ ಮಾಡುವ ನಮಗೆ ಆಯಾ ತಿಂಗಳೇ ವೇತನ ನೀಡಬೇಕು. ನಮ್ಮ ಸಮಸ್ಯೆಗಳನ್ನು ಮಾಜಿ ಮುಖ್ಯಮಂತ್ರಿಗಳೊಂದಿಗೆ ಹಂಚಿಕೊಂಡಿದ್ದೇವೆ. ನಮಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಿ ಮನೆ ಕೊಡಿಸಿದರೆ ಅನುಕೂಲವಾಗಲಿದೆ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದರೆ ಸಮಸ್ಯೆಗೆ ಸ್ಪಂದಿಸುವ ನಂಬಿಕೆ ಇದೆ.
– ಲಕ್ಷ್ಮೀ, ಪೌರ ಕಾರ್ಮಿಕ ಮಹಿಳೆ

-ಉದಯವಾಣಿ

Comments are closed.