ಕರ್ನಾಟಕ

ಬೆಂಗಳೂರಿನಲ್ಲಿ ಮೂಕ ಯುವತಿಯ ಮೇಲೆ ಸೋದರ ಸಂಬಂಧಿಯಿಂದಲೇ ನಿರಂತರ ಅತ್ಯಾಚಾರ, ಆರೋಪಿ ಬಂಧನ

Pinterest LinkedIn Tumblr

ಬೆಂಗಳೂರು: ಮಾತು ಬಾರದ, ಕಿವಿ ಕೇಳದ ತನ್ನ ಸೋದರ ಸಂಬಂಧಿ ಯುವತಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದ ಯುವಕನನ್ನು ಬೆಂಗಳೂರು ಭಾರತಿನಗರ ಪೋಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮಹೇಶ್ ಎಚ್.(23) ಎಂದು ಗುರುತಿಸಲಾಗಿದ್ದು ಮೂಲತಃಅ ಕೊಳ್ಳೇಗಾಲದವನಾದ ಈತ ಶಿವಾಜಿನಗರದ ಹಾರ್ಡ್ ವೇರ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು. ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಅವನ ಸ್ವಂತ ಊರಿನಲ್ಲಿ ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ. ಇದೀಗ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏ.10ರಂದು ಸಂತ್ರಸ್ತೆಯ ತಾಯಿ ಭಾರತಿನಗರ ಪೋಲೀಸರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದರು.
ಮಹೇಶ್ ಅವರ ಮನೆಯಲ್ಲಿ ಸುಮಾರು ನಾಲ್ಕು ತಿಂಗಳಿನಿಂದ ವಾಸವಿದ್ದ. ಅದೊಂದು ದಿನ ಸಂತ್ರಸ್ತ ಯುವತಿಯೊಬ್ಬಳೇ ಮನೆಯಲ್ಲಿದ್ದದ್ದು ಗಮನಿಸಿದ್ದ ಆತ ಅವಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.ಹೀಗೆ ಅನೇಕ ಬಾರಿ ಆಕೆಯನ್ನು ಬಳಸಿಕೊಂಡಿದ್ದ ಮಹೇಶ್ ಅದರ ಕುರಿತು ಯಾರಿಗೂ ತಿಳಿಸದಂತೆ ಯುವತಿಗೆ ಬೆದರಿಕೆ ಹಾಕಿದ್ದನು.

ಮಗಳಲ್ಲಿ ಅಸಹಜ ಬದಲಾವಣೆಯನ್ನು ಗಮನಿಸಿದ್ದ ತಾಯಿ ಆಕೆಯನ್ನು ಪ್ರಶ್ನಿಸಲಾಗಿ ಸಂತ್ರಸ್ತೆಯು ಮೂಕ ಸನ್ನೆಯ ಮೂಲಕ ತನಗಾದ ಅನುಭವವನ್ನು ತಿಳಿಸಿದ್ದಾಳೆ.

ಮಹೇಶ್ ನ ಕೃತ್ಯದ ಕುರಿತಂತೆ ಪೋಲೀಸರಿಗೆ ತಿಳಿಸುವ ಮುನ್ನವೇ ಆತ ತನ್ನ ಊರಿಗೆ ಪರಾರಿಯಾಗಿದ್ದ. ಆದರೆ ದೂರು ದಾಖಲಿಸಿಕೊಂಡ ಪೋಲೀಸರು ಅವನ ಊರಿಗೆ ತೆರಳಿ ಮಹೇಶನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ವೈದ್ಯಕೀಯ ವರದಿ ನಿರೀಕ್ಷೆಯಲ್ಲಿರುವ ಪೋಲೀಸರು ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದಾರೆ.

“ಮಹೇಶ್ ತನ್ನ ಊರಾದ ಕೊಳ್ಳೇಗಾಲದಲ್ಲಿ ಮನೆ-ಆಸ್ತಿ ವಿಚಾರದಲ್ಲಿ ಜಗಳವಾಡಿದ್ದು ಬೆಂಗಳೂರಿಗೆ ಹೊರಟು ಬಂದಿದ್ದ. ಅವನಿಗೆ ಸಂತ್ರಸ್ತೆಯ ತಂದೆಯು ಶಿವಾಜಿನಗರದಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಸಹಾಯ ಮಾಡಿದ್ದರು.ಆದರೆ ತಾನು ಮಾಡಿದ್ದ ನೀಚ ಕೃತ್ಯ ಬೆಳಕಿಗೆ ಬರುತ್ತಲೂ ಶಿವಾಜಿನಗರದ ಕೆಲಸ ತೊರೆದ ಮಹೇಶ್ ಕೊಳ್ಳೇಗಾಲಕ್ಕೆ ಪರಾರಿಯಾಗಿದ್ದ” ಸಂತ್ರಸ್ತೆಯ ಸಂಬಂಧಿಯೊಬ್ಬರು ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Comments are closed.