ಕರ್ನಾಟಕ

ಬೆಂಗಳೂರು: ಕಂಟೈನರ್ ಹಾಗೂ ಗೂಡ್ಸ್ ಲಾರಿ ಡಿಕ್ಕಿ: ತಮಿಳುನಾಡು ಮೂಲದ ಇಬ್ಬರು ಸಜೀವ ದಹನ

Pinterest LinkedIn Tumblr

ಬೆಂಗಳೂರು: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಂಟೈನರ್ ವಾಹನಕ್ಕೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ತಮಿಳುನಾಡು ಮೂಲದ ಇಬ್ಬರು ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಗುರುವಾರ ತಡರಾತ್ರಿ ನಡೆದಿದೆ.

ಮೃತರು ತಂಜಾವೂರಿನ ವೇಲುಮುರುಗನ್(25) ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಹೊಸೂರು ಕಡೆಯಿಂದ ಬಂದ ಗೂಡ್ಸ್ ಲಾರಿ ನಿಂತಿದ್ದ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಕ್ಷಣ ಮಾತ್ರದಲ್ಲಿ ಎರಡು ವಾಹನಗಳಿಗೆ ಬೆಂಕಿ ವ್ಯಾಪಿಸಿದ್ದು ಲಾರಿಯಲ್ಲಿ ಸಿಲುಕಿದ್ದ ಇಬ್ಬರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿದ್ದಾರೆ. ಕಂಟೈನರ್ ವಾಹನದಲ್ಲಿ ಕೆಮಿಕಲ್ ಸಾಗಾಟ ಮಾಡಲಾಗುತ್ತಿದ್ದು, ದಿಢೀರ್ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಆಗಮಿಸಿದ ಅತ್ತಿಬೆಲೆ ಪೊಲೀಸರು ಮೃತ ದೇಹಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆ ಶವಗಾರದಲ್ಲಿ ಇರಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Comments are closed.