ಕರ್ನಾಟಕ

ರಾಜರಾಜೇಶ್ವರಿ ದೇವಸ್ಥಾನದಲ್ಲಿ ಡ್ರೆಸ್‌ಕೋಡ್‌ ಜಾರಿ

Pinterest LinkedIn Tumblr


ಬೆಂಗಳೂರು: ನಗರದ ಪ್ರಸಿದ್ಧ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ (ಡ್ರೆಸ್‌ಕೋಡ್‌) ಜಾರಿಗೊಳಿಸಲಾಗಿದ್ದು, ಇನ್ನು ಮುಂದೆ ಬರ್ಮುಡಾ, ಮಿನಿ ಸ್ಕರ್ಟ್ಸ್ ಮತ್ತಿತರ ಉಡುಪು ಧರಿಸಿ ಬರುವವರಿಗೆ ದೇಗುಲಕ್ಕೆ ಪ್ರವೇಶ ಇರುವುದಿಲ್ಲ. ಈ ಮೂಲಕ ನಗರದ ಖಾಸಗಿ ದೇವಾಲಯವೊಂದು ಇದೇ ಮೊದಲ ಬಾರಿಗೆ ವಸ್ತ್ರಸಂಹಿತೆಯನ್ನು ಅಳವಡಿಸಿಕೊಂಡಿದೆ.

ವಸ್ತಸಂಹಿತೆ ನಿಯಮಗಳನ್ನು ಜಾರಿಗೆ ತಂದಿರುವ ದೇವಾಲಯದ ಆಡಳಿತ ಮಂಡಳಿ, ದೇವಳದ ಆವರಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದೆ. ಅದರಲ್ಲಿ ಯಾವ ಮಾದರಿಯ ಬಟ್ಟೆಗಳು ಧರಿಸಬಹುದು ಹಾಗೂ ಯಾವುದನ್ನು ಹಾಕಿಕೊಳ್ಳಬಾರದು ಎನ್ನುವುದನ್ನು ತಿಳಿಸಲಾಗಿದೆ.

ಮೈಸೂರು ರಸ್ತೆಯ ರಾಜರಾಜೇಶ್ವರಿನಗರದಲ್ಲಿರುವ ಈ ದೇವಾಲಯಕ್ಕೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ರಾಜರಾಜೇಶ್ವರಿ ತಾಯಿಯ ಆಶೀರ್ವಾದ ಪಡೆಯುತ್ತಾರೆ. ಇವುಗಳಲ್ಲಿ ಕೆಲವರು ಅರೆಬರೆ ಬಟ್ಟೆ ಹಾಕಿಕೊಂಡು ದೇಗುಲಕ್ಕೆ ಬರುತ್ತಿದ್ದರು. ಇದು ಸಂಪ್ರದಾಯಕ್ಕೆ ವಿರೋಧವಾಗಿರುವ ಕಾರಣ ಅದಕ್ಕೆ ನಿಷೇಧ ಹೇರಲು ಆಡಳಿತ ಮಂಡಳಿ ಮುಂದಾಗಿದೆ.

”ತಿಂಗಳ ಹಿಂದೆಯೇ ಈ ಸಂಬಂಧ ಸೂಚನಾ ಫಲಕಗಳನ್ನು ದೇವಾಲಯದಲ್ಲಿ ಹಾಕಲಾಗಿದೆ. ಭಕ್ತರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ,” ಎಂದು ಆಡಳಿತ ಮಂಡಳಿ ಸದಸ್ಯರೊಬ್ಬರು ಹೇಳಿದ್ದಾರೆ.
Latest Comment
ಇದು ಆಗಲೇ ಹಲವಾರು ವರ್ಷಗಳಿಂದ ಇದೆ. ಯಾರೋ ದೇವಸ್ಥಾನಕ್ಕೆ ಹೋಗದವರು ಆಪಪ್ರಚಾರ ಮಾಡಲು ಇದನ್ನು ಬಳಸಿಕೊಂಡಿದ್ದಾರೆ ಅಷ್ಟೇ.

ಯಾವ ಉಡುಪು ಸರಿ

ಪುರುಷರು ಧೋತಿ (ಪಂಚೆ), ಅಂಗವಸ್ತ್ರ (ಶಲ್ಯ) ಅಥವಾ ಪ್ಯಾಂಟ್‌ ಮತ್ತು ಶರ್ಟ್‌ಗಳನ್ನು ತೊಟ್ಟು ಬರಬಹುದು. ಮಹಿಳೆಯರು ಸೀರೆ ಮತ್ತು ರವಿಕೆ ಅಥವಾ ಪೂರ್ಣಪ್ರಮಾಣದ ಚೂಡಿದಾರ್‌, ದುಪ್ಪಟ್ಟಾಗಳನ್ನು ಹೊದ್ದು ಬರಬೇಕು. ಜತೆಗೆ ಮಹಿಳೆಯರು ಮತ್ತು ಹೆಣ್ಣಮಕ್ಕಳು ತಲೆಕೂದಲನ್ನು ಬಿಡದೆ, ಜಡೆಯನ್ನು ಹಾಕಿರಬೇಕು ಅಥವಾ ಪೂರ್ತಿಯಾಗಿ ಕಟ್ಟಿರಬೇಕು ಎಂಬುದು ನಿಯಮ.

ಯಾವುದು ನಿಷಿದ್ಧ

ದೇವರ ದರ್ಶನಕ್ಕೆ ಬರುವಾಗ ಪುರುಷರಾಗಲಿ,ಮಹಿಳೆಯರಾಗಲಿ ಆಧುನಿಕ ಶೈಲಿಯ ಬರ್ಮುಡಾ, ಶಾರ್ಟ್ಸ್, ಮಿನಿಸ್ಕರ್ಟ್ಸ್, ಮಿಡೀಸ್‌, ಸ್ಲೀವ್‌ಲೆಸ್‌ ಟಾಫ್ಸ್‌, ಲೋ ವೇಸ್ಟ್‌ ಜೀನ್ಸ್‌, ಟಿ-ಶಟ್ಸ್‌ ನಂತಹ ಉಡುಪುಗಳನ್ನು ಧರಿಸಿ ದೇವಾಲಯಕ್ಕೆ ಹೋಗುವಂತಿಲ್ಲ. ಇದಕ್ಕೆ ಭಕ್ತರು ಸಹಕರಿಸಬೇಕು ಎಂದು ಕೋರಿ ದೇವಾಲಯದ ಆಯಕಟ್ಟಿನ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸಲಾಗಿದೆ.

ಧರ್ಮಸ್ಥಳ, ತಿರುಪತಿಯಂತಹ ಪ್ರಸಿದ್ಧ ದೇವಾಲಯಗಳಲ್ಲಿ ಇಂತಹ ನಿಯಮ ಈಗಾಗಲೇ ಜಾರಿಯಲ್ಲಿದೆ. ಆದರೆ, ನಗರದ ಖಾಸಗಿ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ. ದೇವಸ್ಥಾನಕ್ಕೆ ಸ್ಥಳೀಯರಲ್ಲದೆ, ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.

ಸಂಪ್ರದಾಯ ಪಾಲನೆ:

ದೇವಾಲಯ ಒಂದು ಪವಿತ್ರವಾದ ಸ್ಥಳವಾಗಿದ್ದು, ಇಲ್ಲಿ ಸಂಪ್ರದಾಯ ಹಾಗೂ ಸಂಸ್ಕೃತಿಯ ಪಾಲನೆ ಮಾಡುವ ಅವಶ್ಯಕತೆ ಇದೆ. ಅಲ್ಲದೆ ದೇವಾಲಯಕ್ಕೆ ಬರುವ ಭಕ್ತರಲ್ಲಿ ಬಹುತೇಕರು ಪ್ರವಾಸಕ್ಕೆ ಹೋಗುವ ರೀತಿಯಲ್ಲಿ ಉಡುಪುಗಳನ್ನು ತೊಟ್ಟು ಬರುತ್ತಿದ್ದರು. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತಿತ್ತು. ಹೀಗಾಗಿ ಈ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ ಎನ್ನುತ್ತಾರೆ ದೇವಾಲಯದ ಆಡಳಿತ ಮಂಡಳಿಯವರು.

ಸುಮಾರು 39 ವರ್ಷಗಳ ಹಳೆಯದಾದ ರಾಜರಾಜೇಶ್ವರಿ ದೇವಾಲಯ ಸಹಸ್ರಾರು ಭಕ್ತರನ್ನು ಒಳಗೊಂಡಿದೆ. ದೇವಾಲಯದಲ್ಲಿ ಶ್ರೀ ರಾಜರಾಜೇಶ್ವರಿ ಪ್ರಧಾನ ದೇವತೆ. ಜತೆಗೆ ಗಣೇಶ ಹಾಗೂ ಷಣ್ಮುಖಸ್ವಾಮಿ ಗುಡಿಗಳು ಇವೆ. ಅಮಾವಾಸ್ಯೆ, ಪೌರ್ಣಮಿ ಸೇರಿದಂತೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ.

ವಸಂತ ನವರಾತ್ರಿಯಲ್ಲಿ 11ದಿನ, ಶರನ್ನವರಾತ್ರಿಯಲ್ಲಿ 10 ದಿನಗಳ ಕಾಲ ಇಲ್ಲಿ ಉತ್ಸವ ನಡೆಯುತ್ತದೆ. ಇದರಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ.

Comments are closed.