ಕರ್ನಾಟಕ

ಜಮೀನು ಮರಳಿಸದಿದ್ದರೆ ಅಮಿತ್ ಶಾ ಮುಂದೆ ಆತ್ಮಹತ್ಯೆ!

Pinterest LinkedIn Tumblr


ಬೈಲಹೊಂಗಲ: ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ಕಿತ್ತೂರು ಮತಕ್ಷೇತ್ರ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಸನಗೌಡ ಸಿದ್ರಾಮನಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಮೋಸದಿಂದ ಖರೀದಿಸಿದ ಜಮೀನನ್ನು ರೈತ ಮಾಲೀಕರಿಗೆ ಮರಳಿಸಬೇಕು. ಇಲ್ಲದಿದ್ದರೇ ಕಿತ್ತೂರಿಗೆ ಏ. 2ರಂದು ಆಗಮಿಸುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಾಗನೂರ ಗ್ರಾಮದ ರೈತರು ಎಚ್ಚರಿಸಿದ್ದಾರೆ.

ಭಾನುವಾರ ಪತ್ರಕರ್ತರೊಂದಿಗೆ ಜಮೀನನ್ನು ಮೋಸದಿಂದ ಕಳೆದುಕೊಂಡ ಲಿಂಬೆಪ್ಪ ಕುರಬರ, ಹಣಮಂತ ರುದ್ರಪ್ಪ ಕುರಬರ, ಶಿವಕ್ಕ ಕುರಬರ, ಬಸಪ್ಪ ಕುರಬರ ಮೊದಲಾದ ರೈತರು ಮಾತನಾಡಿ, ನಾಗನೂರ ಗ್ರಾಮದಲ್ಲಿ ಸರ್ವೆ ನಂ. 501 8 ಎಕರೆ 33 ಗುಂಟೆ, ಸರ್ವೆ ನಂ. 502 13 ಎಕರೆ 23 ಗುಂಟೆ ಬೆಲೆ ಬಾಳುವ ಜಮೀನನ್ನು ಮೋಸದಿಂದ ಯಾವುದೇ ಹಣ ನೀಡದೇ ಸತಾಯಿಸಿ ನಮ್ಮ ಕುಟುಂಬದಿಂದ ಬಸನಗೌಡ ಖರೀದಿಸಿದ್ದಾರೆ. ಇದರಿಂದ ರೈತರು ಶೋಷಣೆಗೊಳಗಾಗಿದ್ದಾರೆ. ಇಷ್ಟೆಲ್ಲ ಅನ್ಯಾಯವಾದರೂ ರೈತರ ಪಕ್ಷವೆಂದು ಹೇಳುವ ಬಿಜೆಪಿ ಮುಖಂಡರು ಸುಮ್ಮನಿರುವುದು ವಿಷಾದನೀಯವೆಂದರು.

ಈ ಜಮೀನಿನ ಕುರಿತು ಬೈಲಹೊಂಗಲ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದರೂ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ಕಿತ್ತೂರ ಮತಕ್ಷೇತ್ರದ ಬಿಜೆಪಿ ಆಕಾಂಕ್ಷಿ ಬಸನಗೌಡ ಸಿದ್ರಾಮನಿ ಇದನ್ನು ಲೆಕ್ಕಿಸದೆ ಬೇರೆಯವರಿಗೆ ಜಮೀನನ್ನು ಮಾರಲು ಮುಂದಾಗಿದ್ದಾರೆ. ಹೀಗಾಗಿ ಮನ ನೊಂದಿರುವ ರೈತರು ಏ. 2ರಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಅವರ ಎದುರಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದರು.

Comments are closed.