ರಾಷ್ಟ್ರೀಯ

ಪ್ರೀತಿಯಲ್ಲಿ ಬಿದ್ದ ಕಾರಣ ಓದಲು ಸಾಧ್ಯವಾಗಿಲ್ಲ ಎಂದು ಉತ್ತರ ಪತ್ರಿಕೆಯಲ್ಲಿ ಬರೆದ ವಿದ್ಯಾರ್ಥಿ ಮಹಾಶಯ

Pinterest LinkedIn Tumblr

1
ಮುಜಾಫರ್‌ನಗರ: ಮಕ್ಕಳು ಶ್ರಮ ವಹಿಸಿ ಕಲಿತು ಪರೀಕ್ಷೆ ಎದುರಿಸಿದರೆ ಅವರ ಮುಂದಿನ ಬದುಕು ಉಜ್ವಲವಾಗುತ್ತದೆ ಎಂದು ಪೋಷಕರು ಸಾಕಷ್ಟು ಕನಸು ಕಟ್ಟಿರುತ್ತಾರೆ. ಆದರೆ, ಉತ್ತರ ಪ್ರದೇಶದ ಕೆಲ ವಿದ್ಯಾರ್ಥಿ ಮಹಾಶಯರು ಸಮರ್ಪಕ ರೀತಿಯಲ್ಲಿ ಪರೀಕ್ಷೆ ಎದುರಿಸದೆ, ತಮಗೆ ತೋಚಿದಂತೆ ಗೀಚುವುದು, ಮೌಲ್ಯಮಾಪಕರಲ್ಲಿ ಮನವಿ ಮಾಡುವ ಬರಹಗಳನ್ನು ಬರೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಹೌದು, ಇಲ್ಲಿ ನಡೆದ ಯುಪಿ ಬೋರ್ಡ್‌ನ ಮಧ್ಯಂತರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಉತ್ತರಗಳನ್ನು ಬರೆದಿದ್ದಾರೆ. ವಿದ್ಯಾರ್ಥಿಗಳು ನೀಡಿರುವ ಉತ್ತರ ಹಾಸ್ಯಾಸ್ಪದ ಎನ್ನಿಸಿದರೂ, ಅವರ ಮುಂದಿನ ಭವಿಷ್ಯ ಎತ್ತ ಸಾಗುತ್ತಿದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.

ವಿದ್ಯಾರ್ಥಿ ಮಹಾಶಯನೊಬ್ಬ ರಾಸಾಯನಶಾಸ್ತ್ರದ ಪರೀಕ್ಷೆಯಲ್ಲಿ ಬರೆದ ಉತ್ತರ ಹೀಗಿದೆ…

‘ನಾನು ಪೂಜಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದೇನೆ. ಈ ಪ್ರೀತಿ ಎನ್ನುವುದೇ ವಿಚಿತ್ರ ಕಣ್ರಿ… ಪ್ರೀತಿಯಲ್ಲಿ ಬಿದ್ದವರನ್ನು ಬದುಕಲೂ ಬಿಡಲ್ಲ, ಸಾಯಲು ಸಹ ಬಿಡುವುದಿಲ್ಲ. ಈ ಪ್ರೀತಿ ಎಂಬ ಮಾಯೆ ನನ್ನನ್ನು ಓದಿನಿಂದ ದೂರ ಮಾಡಿದೆ ಎಂದು ತನ್ನ ಪ್ರೇಮ ಪುರಾಣವನ್ನೇ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ.

ಇನ್ನೊಬ್ಬ ವಿದ್ಯಾರ್ಥಿಯಂತೂ ಭಾವನಾತ್ಮಕವಾಗಿ ಪರೀಕ್ಷೆ ಬರೆದಿದ್ದಾನೆ. ‘ನಾನು ತಾಯಿ ಇಲ್ಲದ ತಬ್ಬಲಿ. ನೀವು ನನ್ನನ್ನು ಪರೀಕ್ಷೆಯಲ್ಲಿ ಫೇಲ್ ಮಾಡಿದರೆ, ನನ್ನ ತಂದೆ ನನ್ನನ್ನು ಕೊಂದೇ ಬಿಡುತ್ತಾರೆ. ದಯವಿಟ್ಟು ಪಾಸ್ ಮಾಡಿ ಎಂದು ಬರೆದಿದ್ದರೆ, ಇನ್ನೊಬ್ಬ ವಿದ್ಯಾರ್ಥಿ ಫೇಲ್ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದಾನೆ. ಇಷ್ಟೇ ಅಲ್ಲದೆ ಕೆಲವು ವಿದ್ಯಾರ್ಥಿಗಳು ಉತ್ತರ ಪತ್ರಿಕೆಗೆ ನೋಟುಗಳನ್ನು ಲಗತ್ತಿಸಿ ಮೌಲ್ಯಮಾಪಕರಿಗೆ ಆಮಿಷ ಒಡ್ಡಲು ಯತ್ನಿಸಿದ್ದಾರೆ.

‘ಬಹುತೇಕ ವಿದ್ಯಾರ್ಥಿಗಳು ವಿಲಕ್ಷಣ ಉತ್ತರಗಳನ್ನು ಬರೆದಿದ್ದು, ಉತ್ತರ ಪತ್ರಿಕೆಗಳಿಗೆ ನೋಟುಗಳನ್ನು ಲಗತ್ತಿಸಿ ಮೌಲ್ಯಮಾಪನ ಮಾಡುವವರಿಗೆ ಆಮಿಷ ಒಡ್ಡಲು ಯತ್ನಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದು ಮುಜಾಫರ್‌ನಗರದ ಇನ್ಸ್‌ಪೆಕ್ಟರ್ ಮುನೇಶ್ ಕುಮಾರ್ ತಿಳಿಸಿದ್ದಾರೆ.

Comments are closed.