ಕರ್ನಾಟಕ

ಚುನಾವಣಾ ನೀತಿ ಸಂಹಿತೆ ಬಿಸಿ; ಡೈರಿ ಉದ್ಘಾಟನೆ ಮಾಡದೇ ವಾಪಸ್ ಆದ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಚುನಾವಣಾ ನೀತಿ ಸಂಹಿತೆ ಬಿಸಿ ಮುಟ್ಟಿದ್ದು, ಡೈರಿ ಉದ್ಘಾಟನೆಗಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ಸಿಎಂ ಉದ್ಘಾಟನೆ ಮಾಡದೇ ವಾಪಸ್ ಆಗಿದ್ದಾರೆ.

ಮೂಲಗಳ ಪ್ರಕಾರ ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಬಳಿ ಸುಮಾರು 160 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಬೃಹತ್ ಮೆಗಾ ಡೈರಿ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ಅವರು ಮಾಡಬೇಕಿತ್ತು. ಅದರಂತೆ ಸ್ಥಳೀಯ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಕೋಲಾರ ಶಾಸಕರು ಹಾಗೂ ಹಾಲು ಉತ್ಪಾದಕರ ಒಕ್ಕೂಟ ಇಂದು ಚಿಕ್ಕ ಬಳ್ಳಾಪುರದಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದರು. ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ರಮೇಶ್ ಕುಮಾರ್ ಸೇರಿ ಹಲವು ಸಚಿವರು ಪಾಲ್ಗೊಂಡಿದ್ದರು.

ಸಿಎಂ ಕಾರ್ಯಕ್ರಮಕ್ಕೆ ತೆರಳುವ ವೇಳೆಗಾಗಲೇ ದೆಹಲಿಯಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಓಪಿ ರಾವತ್ ಅವರು ಮತದಾನ ದಿನಾಂಕ ಪ್ರಕಟಿಸಿದ್ದರು. ಅಲ್ಲದೆ ನೀತಿ ಸಂಹಿತೆ ಕೂಡ ಇಂದಿನಿಂದಲೇ ಜಾರಿಯಾಗುತ್ತದೆ ಎಂದು ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಡೈರಿ ಉದ್ಘಾಟನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡದೇ ಕೇವಲ ಡೈರಿ ವೀಕ್ಷಣೆ ಮಾಡಿ ಅಲ್ಲಿಂದ ವಾಪಸ್ ತೆರಳಿದ್ದಾರೆ.

ಸರ್ಕಾರಿ ಕಾರಿನಲ್ಲಿ ಬಂದು ಖಾಸಗಿ ಕಾರಿನಲ್ಲಿ ತೆರಳಿದ ಸಿಎಂ
ಇದೇ ವೇಳೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸರ್ಕಾರಿ ಕಾರಿನಲ್ಲಿ ಬಂದ ಸಿಎಂ ಸಿದ್ದರಾಮಯ್ಯ ಅಲ್ಲಿಂದ ತೆರಳುವಾಗ ಖಾಸಗಿ ಕಾರಿನಲ್ಲಿ ತೆರಳಿ ಅಚ್ಚರಿ ಮೂಡಿಸಿದರು. ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಸಿಎಂ ಸರ್ಕಾರಿ ಕಾರನ್ನು ಅಲ್ಲಿಯೇ ಬಿಟ್ಟು ಸ್ಥಳೀಯ ಶಾಸಕ ಸುಧಾಕರ್ ಅವರ ಖಾಸಗಿ ಕಾರಿನಲ್ಲಿ ವಾಪಸ್ ಆದರು ಎಂದು ತಿಳಿದುಬಂದಿದೆ. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ದಿನಾಂಕ ಪ್ರಕಟವಾಗುತ್ತದೆ ಎಂದು ತಿಳಿದಿತ್ತು. ಆದರೆ ಇಷ್ಚು ಬೇಗ ಆಗುತ್ತದೆ ಎಂದು ತಿಳಿದಿರಲಿಲ್ಲ. ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಅದಕ್ಕೆ ಗೌರವ ನೀಡಿ ಡೈರಿ ಉದ್ಘಾಟನೆ ಮಾಡದೆಯೇ ವಾಪಸ್ ತೆರಳುತ್ತಿದ್ದೇನೆ ಎಂದು ಹೇಳಿದರು.

Comments are closed.