ಕರ್ನಾಟಕ

ಪಾಕ್‌ಗೆ ಹರಿಯುವ ನದಿಗಳನ್ನು ಬಳಸಿ ನೀರಿನ ಕೊರತೆ ನೀಗಿಸಲು ಭಾರತ ತೀರ್ಮಾನ

Pinterest LinkedIn Tumblr


ಬೆಂಗಳೂರು: ಪಾಕಿಸ್ತಾನಕ್ಕೆ ಹರಿದು ಹೋಗುವ ನದಿಗಳಲ್ಲಿ ಇರುವ ನೀರನ್ನು ಬಳಸಿಕೊಂಡು ಪಂಜಾಬ್‌, ಹರಿಯಾಣಾ ಹಾಗು ರಾಜಸ್ಥಾನಗಳ ನೀರಿನ ಸಮಸ್ಯೆ ಬಗೆಹರಿಸಲು ಚಿಂತಿಸುತ್ತಿರುವುದಾಗಿ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಇದೇ ವೇಳೆ ಕಾರವಾರ ಬಂದರು ಅಭಿವೃದ್ಧಿಗಾಗಿ ಸರಕಾರ ಉತ್ಸುಕವಾಗಿದ್ದು ರಾಜ್ಯ ಸರಕಾರ ಒಪ್ಪಿದಲ್ಲಿ 3000 ಕೋಟಿ ರುಗಳನ್ನು ವ್ಯಯಿಸಲು ಸಿದ್ಧವಿರುವುದಾಗಿ ಗಡ್ಕರಿ ತಿಳಿಸಿದ್ದಾರೆ.

ಕಾಲುವೆಗಳ ಬದಲು ಪೈಪ್‌ಲೈನ್‌ಗಳ ಮೂಲಕ ರೈತರಿಗೆ ನೀರು ಪೂರೈಸುವ ಹೊಸ ಯೋಜನೆ ತರುವ ಮೂಲಕ ಸುಮಾರು 6000 ಕೋಟಿ ರುಗಳ ಮೊತ್ತದ ಭೂ ಸ್ವಾಧೀನ ತಪ್ಪಿಸಲು ಸರಕಾರ ನೋಡುತ್ತಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಭಾರತೀಯ ಕೈಗಾರಿಕೆಗಳ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಡ್ಕರಿ ಆಂಧ್ರ ಪ್ರದೇಶದ ಗೋದಾವರಿ ನದಿಯ ಉದಾಹರಣೆ ನೀಡಿದ್ದಾರೆ.

ಗೋದಾವರಿಯ 3000 ಟಿಎಂಸಿಯಷ್ಟು ನೀರು ಸಮುದ್ರಪಾಲಾಗುತ್ತಿದ್ದು ಈ ನಿಟ್ಟಿನಲ್ಲಿ 60,000 ಕೋಟಿ ರು ವೆಚ್ಚದಲ್ಲಿ ಪೋಲಾವರಮ್‌ ಬಳಿ ಅಣೆಕಟ್ಟು ನಿರ್ಮಿಸುವ ಮೂಲಕ ಗೋದಾವರಿಯ ಉಪನದಿ ಇದ್ರವತಿಯ ಹರಿವನ್ನು ನಿಯಂತ್ರಿಸುವ ಕುರಿತಂತೆ ಗಡ್ಕರಿ ಮಾತನಾಡಿದ್ದಾರೆ.

“ಈ ನೀರನ್ನು, 1300ಕಿಮೀ ಪೈಪ್‌ಲೈನ್‌ ಮೂಲಕ ತಮಿಳುನಾಡಿನ ತುತ್ತ ತುದಿಯವರೆಗೂ ಕೊಂಡೊಯ್ಯಬಹುದಾಗಿದೆ. ಯೋಜನೆ ಒಮ್ಮೆ ಪೂರ್ಣಗೊಂಡಲ್ಲಿ ತಮಿಳುನಾಡಿಗೆ ಹೆಚ್ಚುಕಮ್ಮಿ 450 ಟಿಎಂಸಿಯಷ್ಟು ನೀರು ಸಿಗಲಿದೆ” ಎಂದು ಗಡ್ಕರಿ ತಿಳಿಸಿದ್ದಾರೆ.

ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅಗ್ಗದ ದರದಲ್ಲಿ ಸಾರಿಗೆ ಸಂಪರ್ಕ ಒದಗಿಸಬಹುದಾಗಿದೆ ಎಂದ ಗಡ್ಕರಿ, ಸೀಪ್ಲೇನ್‌ಗಳ ಬಳಕೆ ಪ್ರೋತ್ಸಾಹಿಸಲು ಸರಕಾರ ಉತ್ಸುಕವಾಗಿದ್ದು ಈ ನಿಟ್ಟಿನಲ್ಲಿ ಜಂಟಿ ಪಾಲುದಾರಿಕೆಗೆ ಎಚ್‌ಎಎಲ್‌ ಮುಂದಾಗಬೇಕಿದೆ ಎಂದು ಹೇಳಿದ್ದಾರೆ.

ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಬೇಕಿದೆ ಎಂದ ಸಚಿವರು, ವಿದ್ಯುತ್‌ ಹಾಗು ಕೃಷಿ ತ್ಯಾಜ್ಯದಿಂದ ಉತ್ಪಾನೆಯಾಗುವ ಎಥನಾಲ್ ಹಾಗು ಮೆಥನಾಲ್‌ನಂಥ ಪರ್ಯಾಯ ಇಂಧನಗಳಲ್ಲಿ ಓಡುವ ವಾಹನಗಳನ್ನು ಉತ್ಪಾದಿಸುವ ತುರ್ತು ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ವರ್ಷ ಪ್ರತಿ ದಿನಕ್ಕೆ 28 ಕಿಮೀನಷ್ಟು ವೇಗದಲ್ಲಿ ರಸ್ತೆ ನಿರ್ಮಾಣವಾಗುತ್ತಿದ್ದು ಮುಂದಿನ ವರ್ಷ ಇದೇ ವೇಗವನ್ನು ಪ್ರತಿನಿತ್ಯ 40ಕಿಮೀಗೆ ಏರಿಸುವ ಉದ್ದೇಶವಿದೆ ಎಂದಿದ್ದಾರೆ.

ರಸ್ತೆಗಳು, ಬಂದರುಗಳು, ಹಡಗುಗಳು ಹಾಗು ಜಲ ಸಂಪನ್ಮೂಲ ಅಭಿವೃದ್ಧಿ ಸಂಬಂಧ ಸರಕಾರ ಈಗಾಗಲೇ 8,50,000 ಕೋಟಿ ರು ಮೊತ್ತದ ಒಪ್ಪಂದಗಳಿಗೆ ಸಹಿ ಮಾಡಿಯಾಗಿದೆ ಎಂದು ಗಡ್ಕರಿ ಇದೇ ವೇಳೆ ತಿಳಿಸಿದ್ದಾರೆ.

ದೇಶಾದ್ಯಂತ ಎರಡು ಲಕ್ಷ ಕಿಮೀನಷ್ಟು ಹೈವೇಗಳು ಹಾಗು 12 ಎಕ್ಸ್‌ಪ್ರೆಸ್‌ ವೇಗಳ ನಿರ್ಮಾಣಕ್ಕೆ ಸರಕಾರ ಯೋಜಿಸಿದ್ದು ಬೆಂಗಳೂರು-ಮೈಸೂರು ನಡುವಿನ ಹೊಸ ಹೈವೇ ನಿರ್ಮಾಣಕ್ಕೆ 7,000 ಕೋಟಿ ರುಗಳ ಯೋಜನೆಗೆ ಶನಿವಾರದಿಂದ ಚಾಲನೆ ನೀಡಲಾಗಿದೆ ಎಂದಿದ್ದಾರೆ.

ಅಲ್ಲದೇ ಬೆಂಗಳೂರಿಗೆ ಹೊಸ ವರ್ತುಲ ರಸ್ತೆ ನಿರ್ಮಿಸಲಾಗುತ್ತಿದ್ದು ಸುಮಾರು 10,000 ಕೋಟಿ ರು ವೆಚ್ಚವಾಗಲಿದೆ ಎಂದ ಗಡ್ಕರಿ, ಬೆಂಗಳೂರು-ಚೆನ್ನೈ ನಡುವಿನ ಹೈವೇ ನಿರ್ಮಾಣಕ್ಕೆ 16,000 ಕೋಟಿ ರುಗಳ ಯೋಜನೆಯನ್ನು ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ ಆರಂಭದಲ್ಲಿ ಶುರು ಮಾಡಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ.

Comments are closed.