ಕರ್ನಾಟಕ

ಸ್ವಂತ ಅಣ್ಣನ ಮಗನ ಬೆಳವಣಿಗೆಯನ್ನೇ ಸಹಿಸದ ಎಚ್ ಡಿಕೆ ನಮ್ಮ ಬೆಳವಣಿಗೆಗೆ ಸಹಕರಿಸುತ್ತಾರೆಯೇ?: ಜಮೀರ್ ಅಹ್ಮದ್ ಪ್ರಶ್ನೆ

Pinterest LinkedIn Tumblr

ಬೆಂಗಳೂರು: ಸ್ವಂತ ಅಣ್ಣನ ಮಗ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಬೆಳವಣಿಗೆಯನ್ನೇ ಸಹಿಸದ ಎಚ್ ಡಿ ಕುಮಾರ ಸ್ವಾಮಿ ಇತರರ ರಾಜಕೀಯ ಬೆಳವಣಿಗೆಯನ್ನು ಸಹಿಸುತ್ತಾರೆಯೇ ಎಂದು ಚಾಮರಾಜಪೇಟೆ ಶಾಸಕ ಬಿಜಡ್ ಜಮೀರ್ ಅಹ್ಮದ್ ಅವರು ಹೇಳಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಜೆಡಿಎಸ್ ನ ಇತರೆ ಬಂಡಾಯ ಶಾಸಕರೊಂದಿಗೆ ಸೇರಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ನೆರೆದಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಅವರು, ಎಚ್ ಡಿಕೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಕುಮಾರಸ್ವಾಮಿ ಅವರಿಗೆ ಇತರರು ರಾಜಕೀಯವಾಗಿ ಬೆಳೆಯುವುದು ಇಷ್ಟವಿಲ್ಲ. ಸ್ವಂತ ಅಣ್ಣ ಅಂದರೆ ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಏಳಿಗೆಯನ್ನೇ ಸಹಿಸದ ಕುಮಾರಸ್ವಾಮಿ ಅವರು ರಾಜಕೀಯಕ್ಕೆ ಬಾರದಂತೆ ತಡೆಯಲು ಸಕಲ ಪ್ರಯತ್ನ ಮಾಡಿದರು. ಅವರ ಸ್ವಂತ ಅಣ್ಣ ಏಳಿಗೆಯನ್ನೇ ಸಹಿಸದ ಎಚ್ ಡಿಕೆ ಇತರರ ಏಳಿಗೆಗೆ ಸಹಕರಿಸುತ್ತಾರೆ. ಇದೇ ಕಾರಣಕ್ಕೆ ನಾವು ಜೆಡಿಎಸ್ ನಿಂದ ಹೊರಗೆ ಬಂದೆವು ಎಂದು ಹೇಳಿದರು.

ಇದೇ ವೇಳೆ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಕುರಿತು ಹೊಗಳಿಕೆಯ ಮಾತನಾಡಿದ ಜಮೀರ್ ಅವರು, ಪ್ರಜ್ವಲ್ ಅವರಲ್ಲಿ ಉತ್ತಮ ನಾಯಕತ್ವ ಗುಣಗಳಿದ್ದು, ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ. ತಾತಾ ಮಾಜಿ ಪ್ರಧಾನಿ, ಚಿಕ್ಕಪ್ಪ ಮಾಜಿ ಸಿಎಂ ಆಗಿದ್ದರೂ ಪ್ರಜ್ವಲ್ ರೇವಣ್ಣ ಅಂಹಕಾರ ತೋರಿಸಿರಲಿಲ್ಲ. ರಾಜಕೀಯವಾಗಿ ಅವರು ಉತ್ತಮ ನಾಯಕನಾಗಿ ಬೆಳೆಯುತ್ತಾರೆ ಎಂದು ಜಮೀರ್ ಹೇಳಿದರು.

ಇದಕ್ಕೂ ಮೊದಲು ಜೆಡಿಎಸ್ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ, ಭೀಮಾನಾಯ್ಕ್​, ಜಮೀರ್​ ಅಹಮದ್ ​ಖಾನ್ ​ಮತ್ತು ಅಖಂಡ ಶ್ರೀನಿವಾಸಮೂರ್ತಿ ಅವರು ಸ್ಪೀಕರ್ ಕೆಬಿ ಕೋಳಿವಾಡ ಅವರಿಗೆ ಇಂದು ರಾಜಿನಾಮೆ ಪತ್ರ ಸಲ್ಲಿಕೆ ಮಾಡಿದರು. ಇನ್ನು ಮತ್ತೋರ್ವ ಬಂಡಾಯ ಶಾಸಕ ರಮೇಶ್​ ಬಂಡೀಸಿದ್ದೇಗೌಡ ಅವರು ಶುಕ್ರವಾರ ಸಂಜೆಯೇ ಸ್ಪೀಕರ್ ​ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು.

Comments are closed.