ಕರ್ನಾಟಕ

ಬೇಲೂರು ಕಾಂಗ್ರೆಸ್ ಶಾಸಕ ವೈ.ಎನ್ ರುದ್ರೇಶ್ ಗೌಡ ನಿಧನ

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್‍ನ ಹಿರಿಯ ನಾಯಕ , ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎನ್.ರುದ್ರೇಶ್‍ಗೌಡ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಕಳೆದ ಹಲವು ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ನಿನ್ನೆ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರಪ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದ ರುದ್ರೇಶ್ ಗೌಡ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಆಗಮಿಸಿದರು, ಮೂಲತಃ ಜನತಾ ಪರಿವಾರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ರುದ್ರೇಶ್‍ಗೌಡ ಒಂದು ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸತ್‍ಗೆ ಆಯ್ಕೆಯಾಗಿದ್ದರು. ಬಳಿಕ ಕಾಂಗ್ರೆಸ್‍ಗೆ ಸೇರ್ಪಡೆಯಾಗಿ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಕಳೆದ ನಾಲ್ಕು ವರ್ಷಗಳಿಂದ ರುದ್ರೇಶ್ ಗೌಡ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿದ್ದರು. ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದರು. ವಿದೇಶದಲ್ಲೂ ಚಿಕಿತ್ಸೆ ಪಡೆದಿದ್ದರು. ಆದರೆ ಅವರ ಒಂದು ಕಾಲು ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡಿದ್ದರಿಂದ ಸಹಜವಾಗಿ ಓಡಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇಂತಹ ಸ್ಥಿತಿಯಲ್ಲೇ ನಿನ್ನೆ ಅವರು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಸಲು ಬಂದಾಗ ಲಘು ಹೃದಯಾಘಾತವಾಗಿತ್ತು.

ಅವರ ಅಕಾಲಿಕ ನಿಧನಕ್ಕೆ ಕಾಂಗ್ರೆಸ್ ನಾಯಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅವರ ಪಾರ್ಥೀವ ಶರೀರ ಬೆಂಗಳೂರಿನಿಂದ ಬೇಲೂರಿಗೆ ಬರಲಿದ್ದು , ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಸಕ ವೈ.ಎನ್.ರುದ್ರೇಶ್‍ಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Comments are closed.