ಕರ್ನಾಟಕ

ಜೆಡಿಎಸ್‌ ಸೋಲಿಸಿ ಎಂದವ ನಾನೇ, ಏನಿವಾಗ?

Pinterest LinkedIn Tumblr


ಮೈಸೂರು: ರಾಜ್ಯಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡರ ಜೊತೆ ನಾನೇ ಮಾತನಾಡಿದ್ದು, ಜೆಡಿಎಸ್‌ ಸೋಲಿಸಿ ಅಂದದ್ದೂ ನಿಜ, ಏನಿವಾಗ?. ಆಡಿಯೋ ವೈರಲ್‌ ಏನಾಗಿದೆ? ಕೇಳಿಕೊಳ್ಳಲಿ ಬಿಡಿ. ಕಾಂಗ್ರೆಸ್‌ ಮುಖ್ಯಮಂತ್ರಿಯಾಗಿ ನಮ್ಮ ಪಕ್ಷದವರನ್ನೇ ಗೆಲ್ಲಿಸಬೇಕು, ಜೆಡಿಎಸ್‌ ಸೋಲಿಸಿ ಅಂದಿದ್ದೇನೆ, ಅದರಲ್ಲಿ ತಪ್ಪೇನಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಕುಮಾರಸ್ವಾಮಿ ಮೈಸೂರಿಗೆ ಬಂದು ನನಗೆ ಮುತ್ತಿಟ್ಟು ಹೋಗಿದ್ರಾ? ಸಿದ್ದರಾಮಯ್ಯನನ್ನೇ ಗೆಲ್ಲಿಸಿ ಎಂದು ಹೇಳಿ ಹೋಗಿದ್ದರಾ ಎಂದು ಪ್ರಶ್ನಿಸಿದರು. ನಗರದಲ್ಲಿ ವಾಸ್ತವ್ಯ ಹೂಡಿದ್ದ ಅವರು ಗುರುವಾರ ಬೆಳಗ್ಗೆ ನಗರದ ತೊಣಚಿಕೊಪ್ಪಲು ಬಡಾವಣೆಯ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮನೆಯಿಂದ ಹೊರಬಂದು ಕಾರು ಹತ್ತುವಾಗ ಫೋನ್‌ ಮಾಡಿಕೊಟ್ಟರು, ಎಲ್ಲರ ಎದುರು ಬಹಿರಂಗವಾಗಿಯೇ ಮಂಜೇ ಗೌಡರ ಜೊತೆ ಮಾತನಾಡಿದ್ದೇನೆ. ಬಹಿರಂಗವಾಗಿಯೇ ರೆಕಾರ್ಡ್‌ ಆಗಿರಬಹುದು, ಅದರಲ್ಲಿ ತಪ್ಪೇನು? ನಾನು ಮಾತನಾಡಿಲ್ಲ ಎಂದು ಅಲ್ಲಗಳೆದರೆ ತಾನೇ ತಾಪತ್ರಯ. ನಾನೇ ಮಾತನಾಡಿರುವುದು, ಟ್ಯಾಪ್‌ ಮಾಡಿಕೊಳ್ಳುವವರೆಲ್ಲಾ ಮಾಡಿಕೊಳ್ಳಲಿ,

ನಮ್ಮದು ಕದ್ದುಮುಚ್ಚಿ ಏನಿಲ್ಲ, ಎಲ್ಲವೂ ಬಹಿರಂಗ, ತೆರೆದ ಪುಸ್ತಕ ಇದ್ದಂತೆ. ಟೆಲಿ ಫೋನ್‌ ಟ್ಯಾಪಿಂಗ್‌ ಬಗ್ಗೆಯೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಯಾರು ಬೇಕಾದ್ರು ನನ್ನ ಫೋನ್‌ ಕದ್ದಾಲಿಕೆ ಮಾಡಲಿ. ನಾನು ಎಲ್ಲರ ಜೊತೆಯಲ್ಲೂ ಬಹಿರಂಗವಾಗಿಯೇ ಮಾತನಾಡುತ್ತೇನೆ. ಬೇಕಿದ್ರೆ ನೀವೂ (ಮಾಧ್ಯಮ) ನನ್ನ ಫೋನ್‌ ಕದ್ದಾಲಿಕೆ ಮಾಡಿಕೊಳ್ಳಿ ಎಂದರು.

-ಉದಯವಾಣಿ

Comments are closed.