ಅಂತರಾಷ್ಟ್ರೀಯ

ಸೌದಿ ಮೂಲಕ ಇಸ್ರೇಲ್‌ಗೆ ಪ್ರಯಾಣಿಸಿ ಇತಿಹಾಸ ನಿರ್ಮಿಸಿದ ಏರ್‌ ಇಂಡಿಯಾ

Pinterest LinkedIn Tumblr

ಟೆಲ್‌ ಅವಿವ್‌: ಹೊಸದಿಲ್ಲಿ ವಿಮಾನ ನಿಲ್ದಾಣದಿಂದ ಹೊರಟ ಏರ್‌ ಇಂಡಿಯಾ ವಿಮಾನ ಸೌದಿ ಅರೇಬಿಯಾ ಮೂಲಕ ಕ್ರಮಿಸಿ ಇಸ್ರೇಲ್‌ನ ಟೆಲ್ ಅವಿವ್‌ ಬೆನ್‌ ಗುರಿಯೋನ್‌ ವಿಮಾನ ನಿಲ್ದಾಣವನ್ನು ತಲುಪುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

ಹೆಚ್ಚಿನ ಅರಬ್‌ ದೇಶಗಳು ಇಸ್ರೇಲ್‌ಗೆ ವಿಮಾನ ಮಾರ್ಗ ಕಲ್ಪಿಸಲು ಹಿಂದೇಟು ಹಾಕುತ್ತಿದ್ದವು. ಹೀಗಿದ್ದರೂ ಇದೀಗ ಅರಬ್‌ ದೇಶಗಳು ಈ ನಿಯಮವನ್ನು ಬದಿಗಿಟ್ಟಿದ್ದು, ಈ ಮೂಲಕ ದಿಲ್ಲಿಯಿಂದ ಇಸ್ರೇಲ್‌ಗೆ ನೇರವಾಗಿ ವಾಯುಯಾನ ಕಲ್ಪಿಸಲು ಅನುವು ಮಾಡಿವೆ. ಹೀಗಾಗಿ ಈ ಮೊದಲು ತಗುಲುತ್ತಿದ್ದ ಸಮಯಕ್ಕಿಂತ ಎರಡೂವರೆ ಗಂಟೆ ಮೊದಲೇ ವಿಮಾನ ಇಸ್ರೇಲ್‌ನ್ನು ತಲುಪುತ್ತದೆ.

ಇದೇ ಗುರುವಾರದಂದು ಎಐ 139 ವಿಮಾನ ಟೆಲ್‌ ಅವಿವ್‌ ನಿಲ್ದಾಣವನ್ನು ತಲುಪಿತ್ತು. ಈ ಸಂತಸವನ್ನು ವ್ಯಕ್ತ ಪಡಿಸಿದ ಇಸ್ರೇಲ್‌ ಪ್ರವಾಸೋದ್ಯಮ ಸಚಿವ ಯಾರಿವ್‌ ಲೆವಿನ್‌, ‘ ಈ ದಿನ ಇತಿಹಾಸ ಪುಟ ಸೇರಿದೆ. ನೇರ ಇಸ್ರೇಲ್‌ಗೆ ಸಂಪರ್ಕ ಹೊಂದುವ ವಾಯು ಮಾರ್ಗದಿಂದಾಗಿ ಕೇವಲ ಭಾರತ -ಇಸ್ರೇಲ್‌ ನಡುವಿನ ಸಂಬಂಧ ಮಾತ್ರವಲ್ಲದೇ ಈ ಮಾರ್ಗಮಧ್ಯೆ ಬರುವ ಎಲ್ಲಾ ರಾಷ್ಟ್ರಗಳ ಸಾಂಸ್ಕೃತಿಕ ಪರಿಚಯವೂ ಆಗುತ್ತದೆ’ ಎಂದು ಹೇಳಿದ್ದಾರೆ.

ಈ ಮೊದಲು ಟೆಲ್‌ ಅವಿವ್‌ನಿಂದ ಮುಂಬಯಿಗೆ ವಾಯು ಮಾರ್ಗ ಕಲ್ಪಿಸಲಾಗಿತ್ತು, ಆದರೆ ಈ ವಿಮಾನವು ಕೆಂಪು ಸಮುದ್ರದ ಮೂಲಕ ಹಾದು ಸೌದಿ ಅರೇಬಿಯಾ, ಯುಎಇ, ಇರಾನ್, ಅಫ ನಿಸ್ತಾನ ಮತ್ತು ಪಾಕಿಸ್ತಾನ ಮೂಲಕ ಭಾರತಕ್ಕೆ ಬರಬೇಕಿತ್ತು. ಹೀಗಾಗಿ ಒಟ್ಟಾರೆ ಈ ಪ್ರಯಾಣಕ್ಕೆ ಸುಮಾರು 9ಗಂಟೆ 25 ನಿಮಿಷ ತಗುಲುತ್ತಿತ್ತು. ಆದರೆ ಇದೀಗ ಎರಡು ಗಂಟೆ 10 ನಿಮಿಷ ಕಡಿತಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಭಾರತದ ರಾಯಭಾರಿ ಪವನ್‌ ಕಪೂರ್, ಕಳೆದ ಎರಡು ವರ್ಷಗಳಲ್ಲಿ ಈ ಮಾರ್ಗ ಕಲ್ಪಿಸಲು ಎರಡೂ ರಾಷ್ಟ್ರಗಳು ಬಹಳಷ್ಟು ಶ್ರಮ ಪಟ್ಟಿವೆ. ಇದಕ್ಕೆಲ್ಲಾ ಇಂದು ಫಲ ದೊರತಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

Comments are closed.