ಕರ್ನಾಟಕ

ಆಕಾಶ ಕಳಚಿ ಬಿದ್ದಂತಾಗಿದೆ; ಮೊಯ್ಲಿ ಮೊದಲ ಬಾರಿ ಸತ್ಯ ಹೇಳಿದ್ದಾರಂತೆ!

Pinterest LinkedIn Tumblr


ಬೆಂಗಳೂರು/ನವದೆಹಲಿ/ಮೈಸೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಸಂಸದ ವೀರಪ್ಪ ಮೊಯ್ಲಿ ಅವರು ಟಿಕೆಟ್ ಹಂಚಿಕೆ ಕುರಿತಂತೆ ಮಾಡಿರುವ ಟ್ವೀಟ್ ಇದೀಗ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಅಲ್ಲದೇ ಮೊಯ್ಲಿ ಟ್ವೀಟ್ ಗೆ ಬಿಜೆಪಿ ಮುಖಂಡರು ಭರ್ಜರಿ ತಿರುಗೇಟು ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಹೇಳಿಕೆ ಸತ್ಯವಾಗಿದೆ:

ರಾಜ್ಯದಲ್ಲಿರುವುದು 10% ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರ ಟ್ವೀಟ್ ಸಾಕ್ಷಿಯಾಗಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

ಈ ಮೂಲಕ ವೀರಪ್ಪ ಮೊಯ್ಲಿಯವರು ಸತ್ಯ ಹೇಳಿದ್ದಾರೆ. ಇದು ಪರ್ಸೆಂಟೇಜ್ ಸರ್ಕಾರ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದೊಳಗಿನ ಈ ಪರ್ಸೆಂಟೇಜ್ ವ್ಯವಹಾರದ ಬಗ್ಗೆ ಹೇಳಲೇಬೇಕಾದ ಅನಿವಾರ್ಯತೆಗೆ ಮೊಯ್ಲಿಯವರು ಒಳಗಾಗಿದ್ದರು..ಅದನ್ನು ಈಗ ಬಹಿರಂಗಪಡಿಸಿದ್ದಾರೆ ಎಂದು ಶೋಭಾ ಹೇಳಿದರು.

ಸುಳ್ಳೇ ಹೇಳುತ್ತಿದ್ದವರು ಮೊದಲ ಬಾರಿ ಸತ್ಯ ಹೇಳಿದ್ದಾರೆ!ವಿಶ್ವನಾಥ್

ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಮಾರಾಟ ಮಾಡಲು ಮುಂದಾಗಿರೋದು ದುರ್ದೈವದ ಸಂಗತಿ. ಎಲ್ಲರೂ ವೀರಪ್ಪ ಮೊಯ್ಲಿಯವರು ಸುಳ್ಳು ಹೇಳುತ್ತಾರೆ ಎಂದೇ ಹೇಳುತ್ತಿದ್ದರು. ಆದರೆ ಮೊದಲ ಬಾರಿಗೆ ಮೊಯ್ಲಿ ಸತ್ಯ ಹೇಳಿದ್ದಾರೆ. ಈ ಹಿಂದೆ ಡಿಕೆ ಶಿವಕುಮಾರ್ ಅವರಂತಹವರು ಟಿಕೆಟ್ ಮಾರಾಟ ಮಾಡಿದ್ದರು, ಈಗ ಅದು ಕಾಂಟ್ರಾಕ್ಟರ್ ರೂಪದಲ್ಲಿ ಮಾರಾಟವಾಗುತ್ತಿದೆ ಎಂದು ಜೆಡಿಎಸ್ ಮುಖಂಡ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಗೆ ಆಕಾಶವೇ ಕಳಚಿ ಬಿದ್ದ ಹಾಗಾಗಿದೆ:

ವೀರಪ್ಪ ಮೊಯ್ಲಿ ಅವರ ಟ್ವೀಟ್ ನಿಂದಾಗಿ ಕಾಂಗ್ರೆಸ್ ಗೆ ಈಗ ಆಕಾಶವೇ ಕಳಚಿ ಬಿದ್ದ ಹಾಗಾಗಿದೆ. ಕಾಂಗ್ರೆಸ್ ನವರಿಗೆ ಏನು ಮಾಡಬೇಕು ಎಂದು ದಿಕ್ಕೇ ತೋಚುತ್ತಿಲ್ಲ. ರಾಜ್ಯದಲ್ಲಿರುವುದು ಪರ್ಸೆಂಟೇಜ್ ಸರ್ಕಾರ ಎಂಬುದು ಮೊಯ್ಲಿ ಅವರ ಟ್ವೀಟ್ ನಿಂದ ಮತ್ತೆ ಸಾಬೀತಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಕೊನೆಯ ದಿನಗಳ ಲೆಕ್ಕ ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಮೊಯ್ಲಿ ಟ್ವೀಟ್ ನಲ್ಲಿ ಏನಿದೆ?

ಹಣ ರಾಜಕೀಯವನ್ನು ಕಾಂಗ್ರೆಸ್‌ ಬಗೆಹರಿಸಬೇಕಿದೆ. ರಸ್ತೆ ಗುತ್ತಿಗೆದಾರರು ಮತ್ತು ಅವರ ಜತೆ ಸಂಬಂಧ ಹೊಂದಿರುವ ರಾಜ್ಯ ಪಿಡಬ್ಲ್ಯುಡಿ ಸಚಿವರು ಮುಂಬರುವ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳನ್ನು ನಿರ್ಧರಿಸಲಾಗದು ಎಂದು ಮೊಯಿಲಿ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಅವರ ಟ್ವಿಟರ್ ಖಾತೆಯಲ್ಲೂ ಪ್ರಕಟಗೊಂಡಿತ್ತು. ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇಬ್ಬರ ಖಾತೆಯಿಂದಲೂ ಟ್ವೀಟ್‌ ಅನ್ನು ಅಳಿಸಿಹಾಕಲಾಗಿತ್ತು.

-ಉದಯವಾಣಿ

Comments are closed.