ಕರ್ನಾಟಕ

ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಗೂಂಡಾ ಕಾಯಿದೆಯನ್ನು ಧಾರಾಳವಾಗಿ ಬಳಕೆ ಮಾಡಿ: ಗೃಹ ಸಚಿವರ ಫರ್ಮಾನು

Pinterest LinkedIn Tumblr

ಬೆಂಗಳೂರು: ಮಾದಕ ವಸ್ತು ಮಾರಾಟ ದಂಧೆ, ಮಟ್ಕಾ, ಹುಕ್ಕಾ ಬಾರ್‌, ಮೀಟರ್‌ ಬಡ್ಡಿ ವ್ಯವಹಾರವನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಿ. ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಗೂಂಡಾ ಕಾಯಿದೆಯನ್ನು ಧಾರಾಳವಾಗಿ ಬಳಕೆ ಮಾಡಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪೊಲೀಸ್‌ ಅಧಿಕಾರಿಗಳಿಗೆ ಫರ್ಮಾನು ಹೊರಡಿಸಿದ್ದಾರೆ.

”ರೌಡಿ ಶಕ್ತಿಗಳನ್ನು ಮಟ್ಟಹಾಕಲು ಕಾಯಿದೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿ ಮತ್ತು ಗಡಿಪಾರು ಮಾಡಿ. ಈ ವಿಚಾರದಲ್ಲಿ ಹಿಂದೆ ಮುಂದೆ ನೋಡಬೇಡಿ. ಕರ್ತವ್ಯ ನಿರ್ವಹಣೆ ವೇಳೆ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಘಟನೆಗಳು ನಡೆಯಬಾರದು. ಇಂತಹ ಸಂದರ್ಭಗಳಲ್ಲಿ ಇಲಾಖೆ ನೀಡಿರುವ ಶಸ್ತ್ರ್ಸಾಸ್ತ್ರ ಬಳಕೆ ಮಾಡಲು ಯಾವುದೇ ಹಿಂಜರಿಕೆ ಬೇಡ” ಎಂದು ಗೃಹ ಸಚಿವರು ಸೂಚಿಸಿದರು.

ವಿಧಾನಸೌಧದಲ್ಲಿ ಗುರುವಾರ ಕಾನೂನು -ಸುವ್ಯವಸ್ಥೆ ಕುರಿತಂತೆ ಪೊಲೀಸ್‌ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ” ತಾವು ಇಲಾಖೆ ವಹಿಸಿಕೊಂಡ ಏಳು ತಿಂಗಳಲ್ಲಿ ಈ ದಂಧೆಯಲ್ಲಿ ತೊಡಗಿರುವ 400ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದೇ ಕ್ರಮ ಮುಂದುವರಿದರೆ ಮಾದಕ ವಸ್ತು ಜಾಲದ ಮೂಲವನ್ನೇ ನಾಶ ಮಾಡಲು ಸಾಧ್ಯವಿದೆ. ಈ ವಿಚಾರದಲ್ಲಿ ಬದ್ಧತೆಯಿಂದ ಕೆಲಸ ಮಾಡುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ”ಎಂದರು.

”ಬ್ರಿಟಿಷ್‌ ಆಡಳಿತದ ಪರಂಪರೆಯಾಗಿ ಪೊಲೀಸ್‌ ಇಲಾಖೆಯಲ್ಲಿ ಉಳಿದುಕೊಂಡಿದ್ದ ಆಡರ್ಲಿ ವ್ಯವಸ್ಥೆಯನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ತರಬೇತಿ ಪಡೆದ ಪೇದೆಗಳನ್ನು ಅಧಿಕಾರಿಗಳ ಮನೆ ಕೆಲಸಕ್ಕೆ ಬಳಕೆ ಮಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮಂಡ್ಯ ಎಸ್ಪಿ ಸೇರಿದಂತೆ ಹಲವರು ಸಿಬ್ಬಂದಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳ ಬಗ್ಗೆ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಅಡರ್ಲಿಗೆ ಪರ್ಯಾಯವಾಗಿ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ” ಎಂದು ಗೃಹ ಸಚಿವರು ತಿಳಿಸಿದರು.

Comments are closed.