ಕರಾವಳಿ

ಮಾರ್ಚ್ 20ರಂದು ರಾಹುಲ್ ಗಾಂಧಿ ಮಂಗಳೂರಿಗೆ : ಜ್ಯೋತಿ ವೃತ್ತದಿಂದ ಕೇಂದ್ರ ಮೈದಾನದವರೆಗೆ ಬೃಹತ್ ರೋಡ್ ಶೋ

Pinterest LinkedIn Tumblr

ಮಂಗಳೂರು,ಮಾರ್ಚ್.16: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾರ್ಚ್ 20ರಂದು ಮಂಗಳೂರಿಗೆ ಆಗಮಿಸುತ್ತಿದ್ದು ಅಂದು ಸಂಜೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಬೃಹತ್ ರ್‍ಯಾಲಿಯಲ್ಲಿ ಭಾಷಣ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸುತ್ತಿರುವ ರಾಹುಲ್ ಗಾಂಧಿಯವರ ಸ್ವಾಗತಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಅವರ ಸ್ವಾಗತಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಅವರು ತಿಳಿಸಿದ್ದಾರೆ.

ಮಾ.20ರಂದು ಬೆಳಿಗ್ಗೆ ಕಾಪು ಮತ್ತು ಪಡುಬಿದ್ರಿಯಲ್ಲಿ ರೋಡ್ ಶೋ ನಡೆಸಿದ ಬಳಿಕ ರಾಹುಲ್ ಗಾಂಧಿ ಅವರು ಮೂಲ್ಕಿಯ ಮೂಲಕ ದ.ಕ. ಜಿಲ್ಲೆ ಪ್ರವೇಶಿಸುವರು. ಸಂಜೆ 4.30ಕ್ಕೆ ಅವರು ಮಂಗಳೂರಿನ ಅಂಬೇಡ್ಕರ್ ವೃತ್ತ (ಜ್ಯೋತಿ ವೃತ್ತ)ಕ್ಕೆ ಆಗಮಿಸುವರು. ಅಲ್ಲಿಂದ ನೆಹರೂ ಮೈದಾನದವರೆಗೆ ರೋಡ್ ಶೋ ನಡೆಯುವುದು. 5.30ಕ್ಕೆ ನೆಹರೂ ಮೈದಾನದಲ್ಲಿ ಬೃಹತ್ ಸಭೆ ನಡೆಯುವುದು ಎಂದು ಅವರು ಮಾಹಿತಿ ನೀಡಿದರು.

ದೊಡ್ಡಮಟ್ಟದಲ್ಲಿ ಜನ ಸೇರಲಿರುವ ಕಾರಣ ಸಭೆಯನ್ನು ಮೇಲಿನ ಮೈದಾನದಲ್ಲಿ ನಡೆಸಲಾಗುವುದು. ಸುರತ್ಕಲ್‍ನಲ್ಲೂ ದೊಡ್ಡ ಮಟ್ಟದ ರೋಡ್ ಶೋ ನಡೆಯುವುದು ಎಂದು ಅವರು ತಿಳಿಸಿದರು.

ಕರಾವಳಿಯ ದ.ಕ ಜಿಲ್ಲೆಯತ್ತ ದೇಶದ ಜನತೆಯ ಗಮನವಿರುತ್ತದೆ. ಈ ಕಾರಣಕ್ಕಾಗಿಯೇ ಈ ಸಮಾವೇಶ ಹೆಚ್ಚು ಮಹತ್ವವನ್ನು ಪಡೆದಿದೆ. ಇಲ್ಲಿ ನಡೆದಿರುವ ಚರ್ಚ್ ದಾಳಿ ಇರಬಹುದು, ನೈತಿಕ ಪೋಲೀಸ್ ಗಿರಿಯ ಘಟನೆಗಳು, ಧರ್ಮದ ಹೆಸರಿನಲ್ಲಿ ಅಮಾಯಕರ ಕೊಲೆ ಇದೆಲ್ಲವೂ ಮೂಲಭೂತವಾದೀ ಶಕ್ತಿಗಳಿಂದ ನಡೆಯುತ್ತಿದ್ದು ಅದರ ವಿರುದ್ದ ಜಾತ್ಯಾತೀತ ಶಕ್ತಿಗಳು ಒಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮಂಗಳೂರಿಗೆ ಆಗಮಿಸುತ್ತಿದ್ದು ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದ ವರೆಗಿನ ರೋಡ್ ಶೋ ಹಬ್ಬದ ವಾತಾವರಣದಲ್ಲಿ ನಡೆಯಲಿದ್ದು ಬಳಿಕ ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಇದೊಂದು ಐತಿಹಾಸಿಕ ಸಮಾವೇಶವಾಗಲಿದ್ದು ಭಾರೀ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ ಎಂದು ಸಚಿವ ರೈ ತಿಳಿಸಿದರು.

Comments are closed.