ಕರ್ನಾಟಕ

ಅಪ್ರಾಪ್ತ ಪುತ್ರನ ಚಿತ್ರ ಪ್ರಸಾರ ಆರೋಪ; ಪಬ್ಲಿಕ್ ಟಿವಿ ರಂಗನಾಥ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಪತ್ರಕರ್ತ ರವಿಬೆಳಗೆರೆ

Pinterest LinkedIn Tumblr

ಬೆಂಗಳೂರು: ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಪ್ರಾಪ್ತ ಪುತ್ರನ ಚಿತ್ರ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿ ಮಾಧ್ಯಮವೊಂದರ ಮುಖ್ಯಸ್ಥರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪತ್ರಕರ್ತ ರವಿ ಬೆಳಗೆರೆ ಹೇಳಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ರವಿ ಬೆಳಗೆರೆ ಅವರು, ಸುಪಾರಿ ಪ್ರಕರಣವೊಂದರ ಸಂಬಂಧ ಅಪ್ರಾಪ್ತ ಬಾಲಕನ ಚಿತ್ರ ಪ್ರಸಾರ ಮಾಡಿದ ಆರೋಪದಡಿ ಪಬ್ಲಿಕ್‌ಟಿವಿ ಮುಖ್ಯಸ್ಥ ರಂಗನಾಥ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡುವುದಾಗಿ ಹೇಳಿದ್ದಾರೆ.

ಇಂದು ಸಂಜೆ ತಮ್ಮ ಪೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ರವಿ ಬೆಳಗೆರೆ, ‘ನಾನು ಗೆಳೆತನಕ್ಕೆ ತುಂಬಾ ಬೆಲೆ ಕೊಡುತ್ತೇನೆ. ಸುಪಾರಿ ಎಂಬ ಬೃಹತ್ ನಾಟಕ ನಡೆದಾಗ ಎಲ್ಲ ಚಾನಲ್‌ಗಳು ಸುದ್ದಿ ಮಾಡಿದ್ದವು. ಸುಮ್ಮನೆ ಅಲ್ಲ, ಮುಗಿಬಿದ್ದು ಮಾಡಿದ್ದವು. ಹಾಗಿರುವಾಗ ನಾನು ಪಬ್ಲಿಕ್ ಟಿವಿ ಸುದ್ದಿ ಮಾಡಬಾರದು ಅಂತ ನಿರೀಕ್ಷಿಸಲಿಲ್ಲ. ರಂಗ(ರಂಗನಾಥ್) ನನ್ನ 30 ವರ್ಷಗಳ ಗೆಳೆಯ. ಅವನ ತೊಡೆ ಮೇಲೆ ಕುಳಿತ ‘ಗೌಡರ್’ ಎದ್ದು ಹೋಗಿ ಅಲ್ಲೀಗ ಅಜ್ಮತ್ ಎಂಬ ಪುರಾತನ ಪುಣ್ಯ ಪುರುಷ ಕುಳಿತಿದ್ದಾನೆ’. ‘ಇಬ್ಬರೂ ಅಪರಾಧ ವರದಿ (ಕ್ರೈಮ್ ರಿಪೋರ್ಟಿಂಗ್) ಮಾಡಿದವರೇ. ಆದರೆ, ಟಿಆರ್‌ಪಿ ದೋಚುವ ಹಂಬಲದಲ್ಲಿ ನನ್ನ ಪತ್ನಿ, ಮನೆ ಎಲ್ಲವನ್ನೂ ತೋರಿಸಿದರು. ಸರಿ, ಆದರೆ ನನ್ನ 10 ವರ್ಷದ ಮಗ ಏನು ಮಾಡಿದ್ದ? ಅಪ್ರಾಪ್ತ ವಯಸ್ಸಿನ ಮಗುವಿನ ಚಿತ್ರ ತೋರಿಸೋದು ಅಪರಾಧ’ ಅಲ್ಲವೇ?. ‘ಈಗ ನಾನು ರಂಗನ(ರಂಗನಾಥ್) ಮೇಲೆ ತುಂಬಾ ದೊಡ್ಡ ಮೊತ್ತಕ್ಕೆ ಕೇಸ್ ಹಾಕುತ್ತಿದ್ದೇನೆ. ಯಾಕೆ ಬಿಡಲಿ ಹೇಳಿ? ಈ ವಿಷಯದಲ್ಲಿ ನ್ಯಾಯಾಲಯ ತುಂಬಾ ಕಠಿಣವಾಗಿ ನಡೆದುಕೊಳ್ಳುತ್ತದೆ. ರಂಗನಿಗೊಂದು ಗತಿ ಕಾಣಿಸುತ್ತೇನೆ’ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹಾಯ್ ಬೆಂಗಳೂರು ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೊಲೀಸರು ರವಿಬೆಳಗೆರೆ ಅವರನ್ನು ಬಂಧಿಸಿದ್ದರು. ಈ ಪ್ರಕರಣ ರಾಜ್ಯವ್ಯಾಪಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.

Comments are closed.