ಕರ್ನಾಟಕ

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Pinterest LinkedIn Tumblr

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಈ ತಿಂಗಳ 23ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಎಐಸಿಸಿ ವಕ್ತಾರ ನಾಸೀರ್‌ ಹುಸೇನ್‌, ಕೆಪಿಸಿಸಿ ಉಪಾಧ್ಯಕ್ಷ ಎಲ್‌. ಹನುಮಂತಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್‌ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಬಿಜೆಪಿಯೊಳಗೆ ಇಡೀ ದಿನ ನಾಟಕೀಯ ಬೆಳವಣಿಗೆಗಳು ನಡೆದು ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿರುವ ಹಾಲಿ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹೆಸರನ್ನು ಅಂತಿಮವಾಗಿ ವರಿಷ್ಠರು ಪ್ರಕಟಿಸಿದರು. ರಾಯಚೂರು ವಕೀಲ, ವಿಧಾನ ‍ಪರಿಷತ್‌ ಮಾಜಿ ಸದಸ್ಯ ಎನ್‌. ಶಂಕರಪ್ಪ ಅವರಿಗೆ ನಾಮಪತ್ರ ಸಿದ್ಧಪಡಿಸಿಕೊಳ್ಳುವಂತೆ ಬೆಳಿಗ್ಗೆ ಸೂಚಿಸಲಾಗಿತ್ತು. ದಿಢೀರನೆ ರಾಜೀವ್‌ ಚಂದ್ರಶೇಖರ್‌ ಹೆಸರಿಗೆ ಹಸಿರು ನಿಶಾನೆ ತೋರಲಾಯಿತು.

ಶಾಸಕರ ಸಂಖ್ಯಾ ಬಲದ ಆಧಾರದಲ್ಲಿ ಕಾಂಗ್ರೆಸ್‌ ಎರಡು ಸ್ಥಾನ ಮತ್ತು ಬಿಜೆಪಿ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದು. ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಸಹ ಸದಸ್ಯರು ಹಾಗೂ ಪಕ್ಷೇತರರ ಮತಗಳ ಮೇಲೆ ಕಣ್ಣಿಟ್ಟು ಕಾಂಗ್ರೆಸ್‌ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಜೆಡಿಎಸ್‌ ಅಭ್ಯರ್ಥಿಗೆ 30 ಸದಸ್ಯರ ಬಲವಿದ್ದು, ಗೆಲುವಿಗೆ ಇನ್ನೂ 14 ಮತಗಳು ಕೊರತೆಯಾಗಲಿವೆ.ಪ್ರತಿ ಅಭ್ಯರ್ಥಿ ಗೆಲ್ಲುವುದಕ್ಕೆ ತಲಾ 44 ಮತಗಳು ಬೇಕಾಗಲಿದೆ.
***
ಶಂಕರಪ್ಪಗೆ ಕೈ ತಪ್ಪಿದ ಅದೃಷ್ಟ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ರಾಯಚೂರಿನ ಶಂಕರಪ್ಪ ಅವರಿಗೆ ರಾಜ್ಯಸಭೆ ಟಿಕೆಟ್‌ ಸ್ವಲ್ಪದರಲ್ಲೇ ಕೈತಪ್ಪಿದೆ.

ಶನಿವಾರ ರಾತ್ರಿವರೆಗೂ ರಾಜೀವ್‌ ಚಂದ್ರಶೇಖರ್‌ ಹಾಗೂ ವಿಜಯ ಸಂಕೇಶ್ವರ್‌ ಹೆಸರು ಚಲಾವಣೆಯಲ್ಲಿದ್ದವು. ವರಿಷ್ಠರು, ಇವರಿಬ್ಬರನ್ನೂ ಬಿಟ್ಟು ಪಕ್ಷಕ್ಕಾಗಿ ದುಡಿಯುತ್ತಿರುವ ರಾಜ್ಯದ ನಿಷ್ಠಾವಂತರೊಬ್ಬರಿಗೆ ಟಿಕೆಟ್‌ ಕೊಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿದ್ದವು.

ಭಾನುವಾರ ಬೆಳಿಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಶಂಕರಪ್ಪ ಅವರಿಗೆ ಕರೆ ಮಾಡಿ, ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದ್ದರು. ಅದರಂತೆ, ಸಿದ್ಧತೆ ಮಾಡಿಕೊಳ್ಳುವಾಗಲೇ ಸಂಜೆ ಮತ್ತೊಮ್ಮೆ ಕರೆ ಮಾಡಿದ ಯಡಿಯೂರಪ್ಪ ದಯವಿಟ್ಟು ಕ್ಷಮಿಸಿ, ರಾಜೀವ್‌ ಚಂದ್ರಶೇಖರ್‌ ಹೆಸರು ಅಂತಿಮಗೊಂಡಿದೆ ಎಂದು ತಿಳಿಸಿದ್ದಾಗಿ ಮೂಲಗಳು ಸ್ಪಷ್ಟಪಡಿಸಿವೆ.

2011ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಶಂಕರಪ್ಪ ಆಗ ಮುಖ್ಯಮಂತ್ರಿ ಹುದ್ದೆಗೆ ನೇಮಕಗೊಂಡಿದ್ದ ಡಿ.ವಿ. ಸದಾನಂದ ಗೌಡರಿಗೆ ಸ್ಥಾನ ಬಿಟ್ಟುಕೊಟ್ಟಿದ್ದರು. ಆನಂತರ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

Comments are closed.