ಕರ್ನಾಟಕ

3 ಕಿ.ಮೀ ಶವ ಸಾಗಿಸಿದ್ದಕ್ಕೆ 2,500 ಬಿಲ್‌ !

Pinterest LinkedIn Tumblr


ಬೆಂಗಳೂರು: ಆಸ್ಪತ್ರೆಯಿಂದ ಮೂರು ಕಿ.ಮೀ ದೂರದ ಸ್ಥಳಕ್ಕೆ ಆಂಬ್ಯುಲೆನ್ಸ್‌ನಲ್ಲಿ ಶವ ಸಾಗಿಸಲು ಬಡ ವ್ಯಕ್ತಿಯಿಂದ ಎರಡೂವರೆ ಸಾವಿರ ರೂ. ಶುಲ್ಕ ವಿಧಿಸಿ ಅಮಾನವೀಯವಾಗಿ ವರ್ತಿಸಿದ ಎಸ್‌ಎಲ್‌ವಿ ಆಂಬ್ಯುಲೆನ್ಸ್‌ ಸವೀರ್‍ಸ್‌ ವಿರುದ್ಧ ಯುವಕನೊಬ್ಬ ಆಕ್ರೋಶ ವ್ಯಕ್ತಪಡಿಸಿದ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸೂಕ್ತ ಬಿಲ್‌ ನೀಡದೆ 2,500 ಶುಲ್ಕ ಕಿತ್ತುಕೊಳ್ಳುವ ಚಾಲಕ ಅದನ್ನು ಪ್ರಶ್ನೆ ಮಾಡುವ ಯುವಕನ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾನೆ. ಬಡ ವ್ಯಕ್ತಿಯ ಪುತ್ರ ಮೃತಪಟ್ಟಿದ್ದು, ಶುಲ್ಕ ಕಡಿಮೆ ಮಾಡಿಕೊಳ್ಳುವಂತೆ ಕೇಳಿದರೂ ಸ್ವಲ್ಪವೂ ಮಾನವೀಯತೆ ತೋರದೆ ದುಡ್ಡು ಕೊಡು, ದುಡ್ಡು ಕೊಡು ಎನ್ನುವ ದರ್ಪದ ಮಾತುಗಳನ್ನಾಡಿ ಹಣವನ್ನು ಚಾಲಕ ಪಡೆದುಕೊಳ್ಳುತ್ತಾನೆ. ಬಳಿಕ ಬಿಲ್‌ ಅನ್ನು ಯುವಕನಿಂದ ಕಸಿದುಕೊಳ್ಳವ ಭರದಲ್ಲಿ ಅದನ್ನು ಹರಿದು ಹಾಕಿದ್ದಾನೆ. ನಂತರ ಮತ್ತೊಂದು ಬಿಲ್‌ ನೀಡಿದ್ದು ಅದರಲ್ಲಿ ಸರಿಯಾದ ಮಾಹಿತಿಯನ್ನೇ ನಮೂದಿಸಿಲ್ಲ. ಆರು ನಿಮಿಷಗಳ ಈ ವಿಡಿಯೋ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌, ಯುಟ್ಯೂಬ್‌ಗಳಲ್ಲಿ ವ್ಯಾಪಕವಾಗಿ ಶೇರ್‌ ಆಗುತ್ತಿದೆ.

”ನನ್ನ ಸ್ನೇಹಿತ ಮೃತಪಟ್ಟಿದ್ದಾನೆ. ಆಸ್ಪತ್ರೆಯಲ್ಲಿ ಶವ ನೀಡಲು ಹತ್ತು ಸಾವಿರ ರೂ. ಕೇಳಿದರು. ನಂತರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೆ ಐನೂರು ರೂ. ಕೊಡುವಂತೆ ಚಾಲಕ ಕೇಳಿದ. ಬಳಿಕ ಗೇಟ್‌ ತೆರೆದ ವ್ಯಕ್ತಿಗೆ ಐನೂರು ರೂ. ಕೊಡಬೇಕು ಎಂದು ಕೇಳಿದ. ಅಂಬ್ಯುಲೆನ್ಸ್‌ ನಲ್ಲಿ ಶವವನ್ನು ಹಾಕಿಕೊಂಡು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಶವ ಇಳಿಸಿದ ಬಳಿಕ ಸರಿಯಾದ ಬಟ್ಟೆ ಧರಿಸಲು ಹಣವಿಲ್ಲದ ಬಡ ವ್ಯಕ್ತಿಯಿಂದ 2,500 ರೂ. ಕೇಳುತ್ತಿದ್ದಾನೆ. ಇಂತಹ ಅನ್ಯಾಯವನ್ನು ಸಾರ್ವಜನಿಕರು ಪ್ರಶ್ನೆ ಮಾಡಲೇಬೇಕು” ಎನ್ನುವ ಯುವಕನ ಆಕ್ರೋಶದ ಮಾತುಗಳು ಮನಕಲುಕುವಂತಿವೆ.

”3 ಕಿ.ಮೀ ದೂರಕ್ಕೆ ಒಂದು ಮಿತಿಯಷ್ಟು ಹಣ ಕೇಳಬೇಕಲ್ಲವೇ ? ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ಕೇಳುತ್ತಿದ್ದಾನೆ. ಏಕೆ ಅಷ್ಟು ಶುಲ್ಕ ಎಂದಿದ್ದಕ್ಕೆ, ಬೆಂಗಳೂರಿನಲ್ಲಿ ಪ್ರತಿಯೊಂದಕ್ಕೂ ಹಣ ಕೊಡಬೇಕು ಎಂದು ಚಾಲಕ ಹೇಳುತ್ತಿದ್ದಾನೆ” ಎಂದು ಯುವಕ ವಿವರಿಸಿದ್ದಾನೆ.

ಕೆಎ 05 0254 ವಾಹನ ಸಂಖ್ಯೆಯ ಟೆಂಪೋ ಟ್ರಾವೆಲರ್‌ ಚಾಲಕನ ಅಮಾನವೀಯ ವರ್ತನೆಯ ಕುರಿತು ಯುವಕ ಹಿಂದಿಯಲ್ಲಿ ವಿವರಿಸುತ್ತಿದ್ದರೆ, ಹಣ ಕೊಡು ಮೊದಲು ಎಂದು ಚಾಲಕ ಜೋರು ಮಾಡುತ್ತಿದ್ದಾನೆ. ಮೃತ ವ್ಯಕ್ತಿಯ ಹೆಸರು ಮುನೇಶ್ವರ್‌ ವಿಶಾಲ್‌ ಎಂದು ಹೇಳಲಾಗಿದ್ದು, ಘಟನೆ ಎಲ್ಲಿ ನಡೆದಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.

ಇಂತಹ ಅಮಾನವೀಯತೆಯನ್ನು ವಿರೋಧಿಸಬೇಕು: ಶವ ಸಾಗಿಸಿದ್ದಕ್ಕೆ ಆತ ಕೇಳಿದಷ್ಟು ಹಣವನ್ನು ನಾನು ಕೊಡುತ್ತೇನೆ. ಆದರೆ, ಬಡವರಿಂದ ಈ ರೀತಿ ಹಣ ಸುಲಿಗೆ ಮಾಡುವ ಇಂತಹ ವ್ಯವಸ್ಥೆಯ ವಿರುದ್ಧ ಜನ ಹೋರಾಡಬೇಕು. ಇದು ಬಡ ವ್ಯಕ್ತಿಯ ಶವಕ್ಕೆ ಮಾಡುತ್ತಿರುವ ಅವಮಾನ ಎಂದು ಯುವಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಅಂಬ್ಯುಲೆನ್ಸ್‌ ಸಂಪರ್ಕ ಸಂಖ್ಯೆ ಸ್ವಿಚ್‌ ಆಫ್‌: ತಾವರೆಕೆರೆ ಮುಖ್ಯ ರಸ್ತೆ ಬಿಟಿಎಂ ಲೇಔಟ್‌ 1ನೇ ಹಂತದಲ್ಲಿರುವ ಎಸ್‌ಎಲ್‌ವಿ ಆಂಬ್ಯುಲೆನ್ಸ್‌ ಸವೀರ್‍ಸ್‌ನ ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸಿದಾಗ ಮೊಬೈಲ್‌ ನಂಬರ್‌ ಸ್ವಿಚ್‌ ಆಫ್‌ ಆಗಿತ್ತು. ಎಸ್‌ಎಲ್‌ವಿ ವಿರುದ್ಧ ಜಸ್ಡ್‌ ಡಯಲ್‌ನಲ್ಲಿ ನೂರಾರು ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದು, ಅಂಬ್ಯುಲೆನ್ಸ್‌ ಬಳಸಬೇಡಿ ಎಂದು ಕಮೆಂಟ್‌ ಮಾಡಿದ್ದಾರೆ. ಅಲ್ಲದೇ ರೇಟಿಂಗ್‌ ಶೇ.98ರಷ್ಟು ಕಳಪೆ ಸೇವೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ದೂರು ಬಂದಿಲ್ಲ: ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಗಮನಕ್ಕೆ ಬಂದಿದೆ. ಆದರೆ, ಇದುವರೆಗೂ ಯಾರೊಬ್ಬರೂ ಪೊಲೀಸರನ್ನು ಸಂಪರ್ಕಿಸಿಲ್ಲ. ದೂರು ನೀಡಿದರೆ ಪರಿಶೀಲನೆ ನಡೆಸುತ್ತೇವೆ ಎಂದು ಆಗ್ನೇಯ ವಿಭಾಗ ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದರು.

ಸಿಎಂಗೆ ದೂರು: ಆಂಬ್ಯುಲೆನ್ಸ್‌ ಸಂಸ್ಥೆ ಹಾಗೂ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್‌ನಲ್ಲಿ ಹಲವಾರು ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್‌ ಖಾತೆಗೆ ಟ್ಯಾಗ್‌ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಯಾವುದೇ ಪ್ರತಿಕ್ರಿಯೆ ಸಿಎಂ ಖಾತೆಯಿಂದ ಬಂದಿಲ್ಲ.

Comments are closed.