ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ನನ್ನ ಕಡೇ ಚುನಾವಣೆ ಎಂದು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡಿ, ಹಳೆಯ ಸ್ನೇಹಿತರನ್ನೆಲ್ಲಾ ತಮ್ಮತ್ತ ಸೆಳೆದುಕೊಂಡಿರುವುದು ಜೆಡಿಎಸ್-ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.
1967ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಉದಯ ವಾದಾಗಿನಿಂದ ಈವರೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಕೈ ಹಿಡಿದಿರುವುದೇ ಹೆಚ್ಚು. 1967, 72ರಲ್ಲಿ ಕಾಂಗ್ರೆಸ್‌ನ ಕೆ.ಪುಟ್ಟ ಸ್ವಾಮಿ, 1978ರಲ್ಲಿ ಕಾಂಗೈನ ಡಿ.ಜಯದೇವರಾಜ ಅರಸು ಆರಿಸಿಬಂದಿದ್ದರು. 1983ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಡಿ.ಜಯದೇವರಾಜ ಅರಸು ಅವರನ್ನು ಸೋಲಿಸಿದ್ದರು.
1989ರಲ್ಲಿ ಕಾಂಗ್ರೆಸ್‌ನ ಎಂ.ರಾಜಶೇಖರ ಮೂರ್ತಿ ಗೆಲುವು ಸಾಧಿಸಿದ್ದರು. 1994ರಲ್ಲಿ ಮತ್ತೆ ಸಿದ್ದರಾಮಯ್ಯ, 1999ರಲ್ಲಿ ಕಾಂಗ್ರೆಸ್‌ನ ಎ.ಎಸ್.ಗುರುಸ್ವಾಮಿ, 2004ರಲ್ಲಿ, 2008 ರಲ್ಲಿ ಸಿದ್ದರಾಮಯ್ಯ ಅವರು ಕ್ಷೇತ್ರ ಪುನರ್ ವಿಂಗಡಣೆಯಿಂದ ರಚನೆಯಾದ ವರುಣಾ ಕ್ಷೇತ್ರಕ್ಕೆ ಹೋದರೆ, ಚಾಮುಂಡೇಶ್ವರಿ ಯಲ್ಲಿ ಕಾಂಗ್ರೆಸ್‌ನ ಎಂ.ಸತ್ಯನಾರಾಯಣ ಆಯ್ಕೆಯಾಗಿದ್ದರು.
ಈವರೆಗೆ ನಡೆದ 11 ಚುನಾವಣೆಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಮತದಾರ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರಿಗೆ ಮಣೆ ಹಾಕುತ್ತಾ ಬಂದಿದ್ದು, 2013ರ ಚುನಾ ವಣೆಯಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಆರಿಸಿ ಬಂದಿದ್ದಾರೆ. ಒಕ್ಕಲಿಗರು, ವೀರಶೈವ-ಲಿಂಗಾಯಿತರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ನಂತರದ ಸ್ಥಾನ ದಲ್ಲಿ ಕುರುಬ ಸಮುದಾಯದವರಿದ್ದಾರೆ.
ತಮ್ಮ ವಕೀಲ ಸಹಪಾಠಿ ಮಾವಿನಹಳ್ಳಿ ಸಿದ್ದೇಗೌಡ ಆರಂಭದ ದಿನಗಳಿಂದಲೂ ಸಿದ್ದರಾಮಯ್ಯ ಅವರ ರಾಜಕೀಯ ಏಳಿಗೆಗೆ ಶ್ರಮಿಸಿದ್ದರು. 1989ರ ಚುನಾವಣೆ ವೇಳೆಗೆ ಇಬ್ಬರಲ್ಲೂ ವ್ಯತ್ಯಾಸಗಳು ಬಂದು ಬೇರೆ ಬೇರೆ ಯಾದರು. ಬಳಿಕ ಮಾವಿನಹಳ್ಳಿ ಸಿದ್ದೇಗೌಡರು ಸಿದ್ದರಾಮಯ್ಯ ವಿರುದ್ಧವೇ ಸ್ಪರ್ಧಿಸಿ, ಸಿದ್ದರಾಮಯ್ಯ ಸೋಲಿಗೆ ಕಾರಣವಾಗಿದ್ದರು.
2006ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಾಗಲೂ ಚಾಮುಂಡೇಶ್ವರಿ ಕ್ಷೇತ್ರದ ಜನತೆ ಕೈ ಹಿಡಿದಿದ್ದರು. ಆನಂತರ ಅವರು ವರುಣಾ ಕ್ಷೇತ್ರವನ್ನು ಆರಿಸಿಕೊಂಡರೆ ಚಾಮುಂಡೇ ಶ್ವರಿಯಲ್ಲಿ ತಾಲೂಕು ಬೋರ್ಡ್ ಸಹಪಾಠಿ ಎಂ.ಸತ್ಯನಾರಾಯಣ ಅವರನ್ನು ಗೆಲ್ಲಿಸಿದ್ದರು. 2013ರಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಕಾಂಗ್ರೆಸ್‌ನ ಸತ್ಯನಾರಾಯಣ ಅವರನ್ನು ಸೋಲಿಸಿದ್ದರು.
ಇದೀಗ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಕೊನೆಯ ಚುನಾ ವಣೆ ಎದುರಿಸಬೇಕು ಎಂದು ಭರ್ಜರಿ ತಯಾರಿ ನಡೆ ಸಿದ್ದು, ಪೂರಕವಾಗಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಕ್ಷೇತ್ರದ ಹಳ್ಳಿ ಹಳ್ಳಿ ಸುತ್ತಿ ಪಕ್ಷ ಸಂಘಟಿಸುತ್ತಿ ದ್ದಾರೆ. ಸಿದ್ದರಾಮಯ್ಯ ಕೂಡ ತಮ್ಮ ಹಳೇ ಸ್ನೇಹಿತರನ್ನೆಲ್ಲಾ ಸೆಳೆಯುವಲ್ಲಿ ಸಫಲರಾಗಿದ್ದಾರೆ.
ಮಾವಿನಹಳ್ಳಿ ಸಿದ್ಧೇಗೌಡ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೃಷ್ಣಮಾದೇಗೌಡ ಸೇರಿದಂತೆ ಮುಖಂಡರನ್ನು ಕಾಂಗ್ರೆಸ್‌ಗೆ ಕರೆತರುವ ಮೂಲಕ ಸಿದ್ದು ತಮ್ಮ ಬಲ ಹೆಚ್ಚಿಸಿಕೊಂಡಿದ್ದಾರೆ. ಬಿಜೆಪಿಯ ಸಿ.ಎನ್.ಮಂಜೇಗೌಡ ಅವರನ್ನೂ ಸೆಳೆದಿದ್ದಾರೆ. ಇತ್ತ ಜೆಡಿಎಸ್‌ಗೂ ಕೂಡ ಈ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದು, ಸ್ವತಃ ಎಚ್. ಡಿ. ಕುಮಾರಸ್ವಾಮಿ ಯವರೇ ಹಳ್ಳಿಗಳಿಗೆ ಬಂದು ಜಿ.ಟಿ.ದೇವೇಗೌಡರನ್ನು ಕೈಬಿಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
ಜತೆಗೆ ಸಿದ್ದರಾಮಯ್ಯ ಅವರ ರಾಜಕೀಯ ವಿರೋಧಿಗಳಾದ ಶ್ರೀನಿವಾಸ ಪ್ರಸಾದ್, ಎಚ್.ವಿಶ್ವನಾಥ್ ಅವರು ಈಗಾ ಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಸಿದ್ದರಾಮಯ್ಯ ಅವರನ್ನು ಖೆಡ್ಡಾಕ್ಕೆ ಕೆಡವಲು ತಂತ್ರ ರೂಪಿಸುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿ ಸುವುದಾಗಿ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಕಡೆ ಗಳಿಗೆಯ ಬಿಜೆಪಿ ತಂತ್ರ ಏನಾಗಲಿದೆ ನೋಡಬೇಕಿದೆ.
* ಗಿರೀಶ್ ಹುಣಸೂರು
-ಉದಯವಾಣಿ