ಅಂತರಾಷ್ಟ್ರೀಯ

ಭಯೋತ್ಪಾದಕ ಸಯೀದ್‌ ರಾಜಕೀಯ ಪ್ರವೇಶಕ್ಕೆ ಹಸಿರು ನಿಶಾನೆ ತೋರಿದ ಪಾಕ್‌ ಕೋರ್ಟ್‌

Pinterest LinkedIn Tumblr


ಇಸ್ಲಾಮಾಬಾದ್‌: ಮುಂಬಯಿ ಭಯೋತ್ಪಾದಕ ದಾಳಿ ಮಾಸ್ಟರ್‌ ಮೈಂಡ್‌ ಹಫೀಝ್‌ ಸೈಯೀದ್‌ನ ಮಿಲ್ಲಿ ಮುಸ್ಲಿಂ ಲೀಗ್‌ ಎಂಬ ರಾಜಕೀಯ ಪಕ್ಷದ ನೋಂದಣಿ ಮಾಡಿಕೊಳ್ಳಲು ಪಾಕಿಸ್ತಾನದ ಘನ ನ್ಯಾಯಾಲಯವೊಂದು ಅಲ್ಲಿನ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.

ಏಪ್ರಿಲ್‌ 4ರ ಒಳಗಾಗಿ ಸಯೀದ್‌ನನ್ನು ಬಂಧಿಸುವ ಸಾಧ್ಯತೆಗೆ ಪಾಕಿಸ್ತಾನೀ ಕೋರ್ಟ್ ಒಂದು ತಡೆಯಾಜ್ಞೆ ತಂದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಪಕ್ಷದ ನೋಂದಣಿ ಕುರಿತಂತೆ ಚುನಾವಣಾ ಆಯೋಗದ ಹಿಂಜರಿಕೆ ಅಸಾಂವಿಧಾನಿಕ ಎಂದು ಮಿಲ್ಲಿ ಮುಸ್ಲಿಂ ಲೀಗ್ ಪಕ್ಷದ ಅಧ್ಯಕ್ಷ ಸೈಫುಲ್ಲಾ ಖಲೀದ್‌ ಕೋರ್ಟ್‌ ಮೆಟ್ಟಿಲೇರಿದ್ದ. ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಪಕ್ಷದ ನೋಂದಣಿಗೆ ಪಾಕ್‌ ಚುನಾವಣಾ ಆಯೋಗ ಹಿಂದೇಟು ಹಾಕಿತ್ತು.

ಪಾಕಿಸ್ತಾನವನ್ನು ಆರ್ಥಿಕ ಕ್ರಮ ಟಾಸ್ಕ್‌ ಫೋರ್ಸ್‌ನ ಕಪ್ಪು ಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸಬೇಕೆಂದು ಅಂತರ್‌ ಸರಕಾರೀ ಮಟ್ಟದ ಸಭೆಯೊಂದರಲ್ಲಿ ಅಮೆರಿಕ ಹಾಗು ಯುರೋಪ್‌ ನೇತೃತ್ವದ ಪಾಶ್ಚತ್ಯ ಶಕ್ತಿಗಳು ಆಗ್ರಹಿಸಿದ ಬೆನ್ನಲ್ಲೇ ಈ ಘಟನೆ ಜರುಗಿದೆ.

ಕಳೆದ ತಿಂಗಳು ಪ್ಯಾರಿಸ್‌ನಲ್ಲಿ ನಡೆದಿದ್ದ ಎಫ್‌ಎಟಿಎಫ್‌ ಸಭೆಯಲ್ಲಿ ಸಯೀದ್ ಹುಟ್ಟುಹಾಕಿರುವ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕ್ರಮ ತೆಗೆದುಕೊಳ್ಳಬೇಕೆಂದು ಕೂಗೆದ್ದಿತ್ತು. ಅಮೆರಿಕ ಸರಕಾರದ ಖಜಾನೆ ಇಲಾಖೆ ಸಯೀದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಕರೆದಿದೆ.

2008ರ ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ ಸಯೀದ್‌ನನ್ನು ವಿಶ್ವ ಸಂಸ್ಥೆ ಕಪ್ಪು ಪಟ್ಟಿಯಲ್ಲಿಟ್ಟಿತ್ತು. ಅಮೆರಿಕ ಒತ್ತಡಕ್ಕೆ ಮಣಿದಿದ್ದ ಇಸ್ಲಾಮಾಬಾದ್‌ ಸಯೀದ್‌ನನ್ನು ಗೃಹ ಬಂಧನದಲ್ಲಿಟ್ಟಿತ್ತು. ಕಳೆದ ನವೆಂಬರ್‌ನಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು.

Comments are closed.