ಕರ್ನಾಟಕ

ಭ್ರಷ್ಟಾಚಾರ ಆರೋಪ: 9 ಅಧಿಕಾರಿಗಳಿಗೆ ಸಂಬಂಧಿಸಿದ 36 ಸ್ಥಳಗಳ ಮೇಲೆ ಎಸಿಬಿ ದಾಳಿ

Pinterest LinkedIn Tumblr

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಅಧಿಕಾರಿಗಳಿಗೆ ಸಂಬಂಧಿಸಿದ 36 ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಎಸಿಬಿಯ ವಿವಿಧ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ ಎಂದೂ ಹೇಳಲಾಗಿದೆ.

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತುಮಕೂರು, ಕೊಪ್ಪಳ್ಳ, ಬಳ್ಳಾರಿ, ಮಂಗಳೂರು, ಕೋಲಾರ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ಬೆಳಂಬೆಳಿಗ್ಗೆಯೇ ವಿವಿಧ ಇಲಾಖೆಗಳ ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿದ್ದು,ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಬಿಬಿಎಂಪಿ ಎಇಇ ಗಂಗಾಧರ್ ಅವರ ಕಚೇರಿ ಹಾಗೂ ನಂದಿನಿ ಲೇಔಟ್ ನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ, ಮಾಹಿತಿ ಸಂಗ್ರಹಿಸಲಾಗಿದೆ. ಕೆಜಿಐಡಿ ಸೂಪರಿಟೆಂಡ್ ರುದ್ರಪ್ರಸಾದ್ ಅವರ ಕಚೇರಿ ಹಾಗೂ ನಿವಾಸದ ಮೇಲೂ ದಾಳಿ ನಡೆದಿದೆ.

ಚಿಕ್ಕಮಗಳೂರಿನ ಆರ್ ಟಿ ಓ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವಿರೂಪಾಕ್ಷ ನಿವಾಸ ಹಾಗೂ.ಬೆಳಗಾವಿಯ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನಧಿಕಾರಿ ರಾಜೇಶ್ವರಿ ಅವರ ಮನೆ ಮೇಲೂ ದಾಳಿ ನಡೆದಿದೆ.

ಕಡೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಅವರ ತಿಪಟೂರಿನ ವಿದ್ಯಾನಗರದ ನಿವಾಸ ಸೇರಿದಂತೆ ಹಲವೆಡೆ ಎಸಿಬಿ ಡಿವೈಎಸ್ಪಿ ಮೋಹನ್ ನೇತೃತ್ವದಲ್ಲಿನ ತಂಡ ದಾಳಿ ನಡೆಸಿ, ಶೋಧ ಕಾರ್ಯ ನಡೆಸಿತು.

ಚಿಕ್ಕನಾಯಕಹಳ್ಳಿ ತಾಲೂಕು ಆಗನಹಳ್ಳಿ ನಿವಾಸಿಯಾದ ಶಿವಕುಮಾರ್ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ ಆರೋಪ ಕೇಳಿಬಂದಿತ್ತು.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಎಇಇ ವಿಜಯ್ ಕುಮಾರ್ ನಿವಾಸ ಹಾಗೂ ಕಚೇರಿ ಮೇಲೂ ಎಸಿಬಿ ದಾಳಿ ನಡೆಸಿದೆ. ಗಂಗಾವತಿಯಲ್ಲಿನ ಜಯನಗರದಲ್ಲಿರುವ ಅವರ ನಿವಾಸದಲ್ಲಿ ದಾಳಿ ನಡೆಸಿದ್ದು, ಮಹತ್ವದ ದಾಖಲೆ ಪತ್ರ ವಶಪಡಿಸಿಕೊಂಡಿದೆ.

ಮಂಗಳೂರಿನ ಅಬಕಾರಿ ಉಪ ಅಧೀಕ್ಷಕ ವಿನೋದ್ ಕುಮಾರ್ ಅವರ ನಿವಾಸದಲ್ಲೂ ಮೇಲೂ ದಾಳಿ ನಡೆದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಅಪ್ಪರೆಡ್ಡಿ ಅವರ ಮನೆ ಸೇರಿದಂತೆ ಐದು ಕಡೆ ದಾಳಿ ನಡೆಸಲಾಗಿದ್ದು, ಶೋಧ ಕಾರ್ಯ ನಡೆಸಲಾಗಿದೆ.

ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧೆಡೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.

Comments are closed.