ಕರ್ನಾಟಕ

ವಿರೋಧಿಗಳಿಂದಾಗಿ ನಾ ಬೆಳೆದೆ

Pinterest LinkedIn Tumblr

ಮಹಿಳೆಯರು ರಾಜಕೀಯದಲ್ಲಿ ಮೇಲೆ ಬರಬೇಕೆಂದರೆ ಕೊಂಕು ನುಡಿಗಳನ್ನು ಕೇಳದೇ ಬರುವುದು ಕಷ್ಟ. ಸಾಮಾನ್ಯ ರೈತನ ಮಗಳಾಗಿ ಯಾವ ರಾಜಕೀಯ ಹಿನ್ನಲೆಯೂ ಇಲ್ಲದ ಮನೆತನದಿಂದ ಬಂದು ರಾಜ್ಯ ರಾಜಕಾರಣದಲ್ಲಿ ಮಹಿಳಾ ನಾಯಕಿಯಾಗಿ ಗುರುತಿಸಿಕೊಂಡ
ವರು ಲಕ್ಷ್ಮೀ ಹೆಬ್ಟಾಳ್ಕರ್‌.

ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿ ಚಿಕ್ಕ ಗ್ರಾಮದ ಪ್ರಗತಿಪರ ರೈತನ ಮಗಳಾಗಿ ಜನಿಸಿರುವ ಲಕ್ಷ್ಮೀ ಹೆಬ್ಟಾಳ್ಕರ್‌ರನ್ನು ಖಾನಾಪುರದ ರೈತನ ಮನೆಗೆ ಮದುವೆ ಮಾಡಿಕೊಟ್ಟರು. ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್‌ ಆಳ್ವಾ ಅವರ ಪ್ರಭಾವಕ್ಕೊಳಗಾಗಿ ಅವರ ಚುನಾವಣೆಯಲ್ಲಿ ಓಡಾಡಿ ಗಮನ ಸೆಳೆದರು. ಚುನಾವಣೆಯಲ್ಲಿ ಚುರುಕಿನಿಂದ ಕೆಲಸ ಮಾಡುವುದನ್ನು ಕಂಡ ಮಾರ್ಗರೆಟ್‌ ಆಳ್ವ ರಾಜಕಾರಣಕ್ಕೆ ಕರೆ ತಂದರು.

ಬಳಿಕ ಖಾನಾಪುರ ತಾಲೂಕು ಮಹಿಳಾ ಘಟಕದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆಯಾದರು. ಭಾಷಾಜ್ಞಾನ ಮತ್ತು ಚುರುಕಿನ ವ್ಯಕ್ತಿತ್ವ ಉಳ್ಳವರಾಗಿರುವ ಲಕ್ಷ್ಮೀ ತಮ್ಮ ಕಾರ್ಯ ಚಟುವಟಿಕೆಯಿಂದಲೇ ರಾಜ್ಯ ನಾಯಕರ ಗಮನ ಸೆಳೆದರು. 2008ರಲ್ಲಿ ಬೆಳಗಾವಿ ಜಿಲ್ಲಾ ರಾಜಕಾರಣಕ್ಕೆ ಕಾಲಿಟ್ಟ ಇವರು ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷೆ ಆಗಿ ನೇಮಕಗೊಂಡರು.

ಪ್ರಭಾವಿ ನಾಯಕರ ರಾಜಕಾರಣದ ನಡುವೆ ಮಹಿಳಾ ನಾಯಕಿಯಾಗಿ ರಾಷ್ಟ್ರೀಯ ಪಕ್ಷವನ್ನು ಜಿಲ್ಲೆಯಲ್ಲಿ ಬಲಗೊಳಿಸಿದ್ದು ಅವರ ಸಂಘಟನಾ ಶಕ್ತಿಗೆ ಹಿಡಿದ ಕನ್ನಡಿ. ಜಿಲ್ಲೆಯಲ್ಲಿ ಚುರುಕಿನಿಂದ ಪಕ್ಷ ಸಂಘಟನೆಯಿಂದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಗಮನ ಸೆಳೆದ ಲಕ್ಷ್ಮೀ ಹೆಬ್ಟಾಳ್ಕರ್‌ 2013 ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ ಸಾವಿರದ ಮುನ್ನೂರು ಮತಗಳ ಅಂತರದಿಂದ ಸೋತರು.

ಧೃತಿಗೆಡದೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ನಡೆಸಿದರು. ಅವರ ಪರಿಶ್ರಮಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ 2014ರ ಲೋಕಸಭೆಗೂ ಸ್ಪರ್ಧೆಗೆ ಅವಕಾಶ ಕಲ್ಪಿಸಿಕೊಟ್ಟಿತು. ಮಹಿಳೆಯಾಗಿ ಪರಿಶ್ರಮದಿಂದ ಪಕ್ಷ ಕಟ್ಟಿ ಚುನಾವಣೆ ಎದುರಿಸುವುದು ಎಷ್ಟು ಕಷ್ಟ ಎನ್ನುವುದು ಈ ಚುನಾವಣೆಯಲ್ಲಿ ಲಕ್ಷ್ಮೀ ಹಬ್ಟಾಳ್ಕರ್‌ಗೆ ಅರಿವಾಗಿದೆ.

ಸ್ವಪಕ್ಷೀಯ ನಾಯಕರೇ ಮಹಿಳೆಯ ಏಳಿಗೆಗೆ ಹೇಗೆ ಅಡ್ಡಗಾಲಾಗುತ್ತಾರೆ ಎನ್ನುವುದನ್ನು ಲೋಕಸಭಾ ಚುನಾವಣೆಯ ಸೋಲಿನಿಂದ ಅರಿತಿದ್ದಾರೆ. ಆದರೂ ಛಲ ಬಿಡದೆ ವಿರೋಧಿಗಳಿಗೆ ತಲೆ ಕೆಡಿಸಿಕೊಳ್ಳದೇ ಪಕ್ಷ ನಿಷ್ಠೆ ಮತ್ತು ರಾಜ್ಯ ನಾಯಕರ ಸಹಕಾರದಿಂದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿ ಕಾಂಗ್ರೆಸ್‌ ಮಹಿಳಾ ಘಟಕವನ್ನು ಸಕ್ರಿಯಗೊಳಿಸಿದ್ದಾರೆ. ಈ ಬಾರಿ ಚುನಾವಣೆಯ ಅಗ್ನಿ ಪರೀಕ್ಷೆ ಎದುರಿಸಲು ಸಿದ್ಧರಾಗಿದ್ದಾರೆ.

ನನ್ನ ರಾಜಕೀಯ ಜೀವನಕ್ಕೆ ಪ್ರೋತ್ಸಾಹಿಸಿದವರಿಗಿಂತ ತುಳಿಯಲು ಪ್ರಯತ್ನಿಸಿದವರೇ ಹೆಚ್ಚು. ವಿರೋಧಿಗಳು ಹೆಚ್ಚಾಗಿದ್ದರಿಂದಲೇ ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಯಿತು. ನನ್ನ ರೂಪವೂ ನನಗೆ ಮುಳುವಾಗಿದೆ ಎನಿಸುತ್ತದೆ.
-ಲಕ್ಷ್ಮೀ ಹೆಬ್ಟಾಳ್ಕರ್‌

* ಶಂಕರ ಪಾಗೋಜಿ

-ಉದಯವಾಣಿ

Comments are closed.