ಕ್ರೀಡೆ

ಕೊಹ್ಲಿ ಬೆಂಬಲಿಸಿದ್ದಕ್ಕೆ ಆಯ್ಕೆದಾರನ ಹುದ್ದೆಗೆ ಕುತ್ತು: ವೆಂಗ್ಸರ್ಕರ್‌

Pinterest LinkedIn Tumblr


ದೆಹಲಿ: ಭಾರತ ಕ್ರಿಕೆಟ್‌ ತಂಡದ ಈಗಿನ ನಾಯಕ ವಿರಾಟ್‌ ಕೊಹ್ಲಿರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೆಂದು ಬೆಂಬಲ ನೀಡಿದ ಕಾರಣ 2008ರಲ್ಲಿ ಆಯ್ಕೆದಾರನಾಗಿ ತಮ್ಮ ಹುದ್ದೆಗೆ ಕುತ್ತು ಬಂದಿತ್ತು ಎಂದು ಮಾಜಿ ನಾಯಕ ದಿಲೀಪ್ ವೆಂಗ್ಸರ್ಕರ್‌ ಹೇಳಿದ್ದಾರೆ.

ಇದೇ ವಿಚಾರವಾಗಿ ಬಿಸಿಸಿಐನ ಅಂದಿನ ಖಜಾಂಚಿ ಎನ್‌ ಶ್ರೀನಿವಾಸನ್‌ರೊಂದಿಗೆ ಭಿನ್ನಭಿಪ್ರಾಯ ಬೆಳೆಯಿತೆಂದು ಮುಂಬಯಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೆಂಗ್ಸರ್ಕರ್‌ ತಿಳಿಸಿದ್ದಾರೆ.

2008ರ ಅಂಡರ್‌-19 ವಿಶ್ವ ಕಪ್‌ ವಿಜೇತ ತಂಡದ ನಾಯಕ ವಿರಾಟ್‌ ಕೊಹ್ಲಿರನ್ನು ಅದೇ ವರ್ಷದ ಮಧ್ಯಭಾಗದಲ್ಲಿ ಜರುಗಿದ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದಲ್ಲಿ ಆಯ್ಕೆ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದ್ದು ತಮ್ಮ ಆಯ್ಕೆದಾರನ ಹುದ್ದೆಗೆ ಅಂತ್ಯ ಹಾಡಿತು ಎಂದು ತಿಳಿಸಿದ್ದಾರೆ.

ಶ್ರೀಲಂಕಾ ಪ್ರವಸಕ್ಕೆ ತಂಡವನ್ನು

ಆಯ್ಕೆ ಮಾಡುವ ವೇಳೆ ವಿರಾಟ್‌ ಕೊಹ್ಲಿಗೆ ತಂಡದಲ್ಲಿ ಸ್ಥಾನ ಕೊಡಲು ತಾವು ಉತ್ಸುಕತೆ ತೋರಿದ್ದರೂ ಈ ವಿಚಾರವಾಗಿ ಅಂದಿನ ನಾಯಕ ಧೋನಿ ಹಾಗು ಕೋಚ್‌ ಗ್ಯಾರಿ ಕರ್ಸ್ಟನ್‌ ಸಂತುಷ್ಟರಾಗಿರಲಿಲ್ಲ ಎಂದಿದ್ದಾರೆ.

“ಕೊಹ್ಲಿಯನ್ನು ತಂಡದಲ್ಲಿ ಸೇರಿಸಿಕೊಳ್ಳಲು ಇದು ಸೂಕ್ತ ಸಂದರ್ಭ ಎಂಬ ನನ್ನ ಮಾತನ್ನು ನಾಲ್ವರು ಸಹ ಆಯ್ಕೆದಾರರು ಒಪ್ಪಿದ್ದರು. ಆದರೆ ಕೊಹ್ಲಿಯನ್ನು ಇನ್ನೂ ಸರಿಯಾಗಿ ನೋಡಿರದ ಕಾರಣ ಈ ವಿಚಾರವಾಗಿ ಧೋನಿ ಹಾಗು ಕರ್ಸ್ಟನ್‌ ಸಹಮತವಿರಲಿಲ್ಲ. ಆದರೆ ನಾನು ಆತನನ್ನು ಗಮನಿಸಿದ್ದು ತಂಡದಲ್ಲಿ ಸೇರಿಸಿಕೊಳ್ಳಬೇಕು ಎನಿಸುತ್ತದೆ” ಎಂದಿದ್ದಾಗಿ ವೆಂಗ್ಸರ್ಕರ್‌ ತಿಳಿಸಿದ್ದಾರೆ.

“ಚೆನ್ನೈ ಸೂಪರ್‌ ಕಿಂಗ್ಸ್‌ ಆಟಗಾರನಾದ ಕಾರಣ ಎಸ್ ಬದ್ರಿನಾಥ್‌ರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವರು ಉತ್ಸುಕತೆ ತೋರಿದ್ದರು. ಕೋಹ್ಲಿಗೆ ಜಾಗ ನೀಡಿದಲ್ಲಿ ಬದ್ರಿನಾಥ್‌ರನ್ನು ಆಚೆ ಇಡಬೇಕಾಗಿತ್ತು. ಆ ಸಮಯದಲ್ಲಿ ಶ್ರೀನಿವಾಸನ್‌ ಬಿಸಿಸಿಐನ ಖಜಾಂಚಿಯಾಗಿದ್ದರು. ಬದ್ರಿನಾಥ್‌ರನ್ನು ಕೈಬಿಟ್ಟಾಗ ಅವರು ನಿರಾಶರಾಗಿದ್ದರು” ಎಂದು ವೆಂಗ್ಸರ್ಕರ್‌ ಹೇಳಿದ್ದಾರೆ.

2006ರ‍ಲ್ಲಿ ಕಿರಣ್‌ ಮೋರೆ ಬಳಿಕ ಆಯ್ಕೆದಾರನ ಸ್ಥಾನಕ್ಕೆ ಬಂದ ವೆಂಗ್ಸರ್ಕರ್‌ರನ್ನು ಎರಡು ವರ್ಷ ತುಂಬುವ ಮುನ್ನವೇ ಕಿತ್ತೊಗೆಯಲಾಗಿತ್ತು. ಬಳಿಕ ಆಯ್ಕೆದಾರನ ಸ್ಥಾನಕ್ಕೆ ಕೃಷ್ಣಮಚಾರಿ ಶ್ರೀಕಾಂತ್‌ರನ್ನು ತಂದು ಕೂರಿಸಲಾಗಿತ್ತು. ಇದಕ್ಕೂ ಶ್ರೀನಿವಾಸನ್‌ರ ಪ್ರಭಾವವೇ ಕಾರಣ” ಎಂದು ವೆಂಗ್ಸರ್ಕರ್‌ ಆಪಾದಿಸಿದ್ದಾರೆ.

Comments are closed.