ಕರ್ನಾಟಕ

ಕೊಲೆ ಮಾಡಲೆಂದೇ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಮೇಲೆ ದಾಳಿ ಮಾಡಿದ್ದಾನೆ, ತನಿಖೆಗೆ ಸೂಚಿಸಿದ್ದೇನೆ: ಸಿಎಂ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಮಧ್ಯಾಹ್ನ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿಶ್ವನಾಥ್ ಶೆಟ್ಟಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಮೇಲ್ನೋಟಕ್ಕೆ ವಿಶ್ವನಾಥ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದರು.

ಆರೋಪಿ ತೇಜ ರಾಜ್ ಶರ್ಮಾ ಯಾವುದೋ ಟೆಂಡರ್‍ಗೆ ಹಾಕಿದ್ದ. ಅದು ಆತನಿಗೆ ಸಿಕ್ಕಿರಲಿಲ್ಲ. ಅಧಿಕಾರಿಯಿಂದ ಮೋಸವಾಗಿದೆ, ಈ ಬಗ್ಗೆ ತನಿಖೆ ಮಾಡಿ ಎಂದು ದೂರು ನೀಡಿದ್ದ. ಆದ್ರೆ ಅವರು ವಿಚಾರಣೆ ಮುಗಿದಿದೆ ಎಂದು ಎಂಡಾರ್ಸ್‍ಮೆಂಟ್ ಕೊಟ್ಟಿದ್ದಾರೆ. ಹೀಗಾಗಿ ಆತ ಲೋಕಾಯುಕ್ತರನ್ನ ಭೇಟಿ ಮಾಡಬೇಕೆಂದು ಹೋಗಿ ಚಾಕುವಿನಿಂದ ಇರಿದಿದ್ದಾನೆ. ಕೊಲೆ ಮಾಡಲೆಂದೇ ಆತ ದಾಳಿ ನಡೆಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಚಾಕು ಕೂಡ ದೊಡ್ಡದಾಗಿತ್ತು. ಹೀಗಾಗಿ ಇದು ಕೊಲೆ ಪ್ರಯತ್ನ ಎಂಬುದು ಸ್ಪಷ್ಟ ಎಂದು ಹೇಳಿದ್ರು.

ಆರೋಪಿಯನ್ನ ಬಂಧಿಸಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಈ ಹಿಂದೆ ಯಾವತ್ತೂ ಹೀಗೆ ಆಗಿರಲಿಲ್ಲ. ಹೀಗಾಗಿ ಈ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಲು ಡಿಜಿಪಿಗೆ ಹೇಳಿದ್ದೇನೆ. ಆರೋಪಿ ಯಾರು, ಆತನ ಹಿನ್ನೆಲೆ ಇತ್ಯಾದಿಯ ಬಗ್ಗೆ ತನಿಖೆ ಮಾಡುವಂತೆ ಸೂಚಿಸಿದ್ದೇನೆ. ವಿಶ್ವನಾಥ್ ಶೆಟ್ಟಿ ಅವರನ್ನು ಚೆನ್ನಾಗಿ ನೊಡಿಕೊಳ್ಳುವಂತೆ ವೈದ್ಯರಿಗೂ ಮನವಿ ಮಾಡಿದ್ದೇನೆ ಎಂದರು.

ಭದ್ರತಾ ವೈಫಲ್ಯವಿದೆಯಾ ಎಂಬುದನ್ನು ಪರಿಶೀಲಿಸಲು ಹೇಳಿದ್ದೇನೆ. ವೈಫಲ್ಯವಿದ್ದರೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಸಾಮಾನ್ಯವಾಗಿ ಭೇಟಿ ಮಾಡಬೇಕೆಂದು ಚೀಟಿ ಕೊಡುತ್ತಾರೆ, ಅವರು ಒಳಗೆ ಕರೆದಿದ್ದಾರೆ. ಆತ ಒಳಗೆ ಹೋದಾಗ ಚಾಕು ಚುಚ್ಚಿದ್ದಾನೆ. ನನ್ನನ್ನೂ ಸಾಕಷ್ಟು ಜನ ಭೇಟಿಯಾಗಲು ಬರುತ್ತಾರೆ. ನಮಗೇನು ಗೊತ್ತಿರುತ್ತೆ ಆಯುಧ ತೆಗೆದುಕೊಂಡು ಬಂದರೆ? ಗನ್ ಮ್ಯಾನ್ ಹೊರಗೆ ಇರುತ್ತಾರೆ, ಸಿಸಿಟಿವಿ ಕೂಡ ಇರುತ್ತದೆ. ಈತ ಚೇಂಬರ್ ಒಳಗೆ ಹೋಗಿ ಈ ಕೃತ್ಯವೆಸಗಿದ್ದಾನೆ. ವಿಶ್ವನಾಥ್ ಶೆಟ್ಟಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದರು.

ನಡೆದಿದ್ದೇನು?: ಇಂದು ಮಧ್ಯಾಹ್ನ 12.45ರ ಸುಮಾರಿಗೆ ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಗೆ ಲೋಕಾಯುಕ್ತರನ್ನ ಭೇಟಿಯಾಗಲು ಆರೋಪಿ ತೇಜ ರಾಜ್ ಶರ್ಮಾ ಬಂದಿದ್ದ. ರಿಜಿಸ್ಟರ್ ಪುಸ್ತಕದಲ್ಲಿ ತನ್ನ ಹೆಸರು, ವಾಹನ ನೋಂದಣಿ ಸಂಖ್ಯೆ ಎಲ್ಲವನ್ನೂ ಬರೆದು ಕಚೇರಿ ಒಳಗೆ ಹೋದ ಶರ್ಮಾ, ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ಮಾಡಿ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಆರೋಪಿಯನ್ನ ವಿಧಾನ ಸೌಧ ಪೊಲೀಸರು ಬಂಧಿಸಿದ್ದಾರೆ. ವಿಶ್ವನಾಥ್ ಶೆಟ್ಟಿ ಅವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Comments are closed.