ಕರಾವಳಿ

ನಿಷೇಧ ಉಲ್ಲಂಘಿಸಿದರೆ ಡಿಸೆಲ್ ಸಬ್ಸಿಡಿ ರದ್ದು-ಮೀನುಗಾರಿಕೆ ನಿರ್ದೇಶಕರು

Pinterest LinkedIn Tumblr

ಉಡುಪಿ: ನಿಷೇಧಿತ ಬೆಳಕು ಮೀನುಗಾರಿಕೆ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆ, ಅವೈಜ್ಞಾನಿಕವಾಗಿ ಪಚ್ಚಿಲೆ ಮೀನುಗಾರಿಕೆ, ಚೌರಿ ಮತ್ತು ಪ್ಲಾಸ್ಟಿಕ್ ಬಳಸಿ ಅನಧಿಕೃತವಾಗಿ ಕಪ್ಪೆ ಬಂಡಸನ್ನು ಹಿಡಿಯುವುದನ್ನು ಈಗಾಗಲೇ ನಿಷೇಧಿಸಲಾಗಿದ್ದು, ಈ ನಿಷೇಧದ ಉಲ್ಲಂಘನೆ ಮಾಡಿದ ದೋಣಿಗಳ ಡೀಸಿಲ್ ಸಹಾಯಧನವನ್ನು ತಡೆಹಿಡಿಯಲು ಮತ್ತು ದೋಣಿಯ ಮೀನುಗಾರಿಕೆ ಲೈಸನ್ಸ್ / ನೋಂದಾವಣೆಯನ್ನು ರದ್ದುಗೊಳಿಸುವಂತೆ ಮೀನುಗಾರಿಕೆ ಇಲಾಖೆ ನಿರ್ದೇಶಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮೀನುಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದ್ದು, ನಿಷೇಧ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಎಚ್ಚರಿಕೆಯನ್ನು ಇಲಾಖಾ ನಿರ್ದೇಶಕರು ನೀಡಿದ್ದಾರೆ.
ಕರ್ನಾಟಕ ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಭೆಯಲ್ಲಿ ರಾಜ್ಯದಲ್ಲಿ ಮೀನುಗಾರಿಕೆ ನಡೆಸುವಾಗ ದುರ್ಮರಣಕ್ಕೀಡಾದ ಆಗಸ್ಟ್ 2017ರ ನಂತರ ಒಟ್ಟು 26 ಜನರಿಗೆ ಪರಿಹಾರ ನೀಡಿರುವುದನ್ನು ಸ್ಥಿರೀಕರಿಸಲಾಯಿತು. ಹಾಗೆಯೇ ಬಲೆ ಹಾನಿಯ 1 ಪ್ರಕರಣ, ದೋಣಿ ಹಾನಿಯ 2 ಪ್ರಕರಣ ಮತ್ತು ವೈದ್ಯಕೀಯ ವೆಚ್ಚದ ಪರಿಹಾರದ 1 ಪ್ರಕರಣಕ್ಕೆ ಒಟ್ಟು ರೂ. 61ಲಕ್ಷ ಪರಿಹಾರ ನೀಡಿರುವುದನ್ನು ಅನುಮೋದಿಸಲಾಯಿತು.

ಅಲ್ಲದೆ ಇಲಾಖೆಯಿಂದ ಅಧಿಕೃತವಾಗಿ ಘೋಷಿಸಲ್ಪಟ್ಟ ಮೀನುಗಾರಿಕೆ ಬಂದರುಗಳು ಮತ್ತು ಇಳಿದಾಣಗಳಲ್ಲಿ, ತೀರದಲ್ಲಿ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿರುವಾಗ ಅವಘಡಗಳು ಸಂಭವಿಸಿ ಮೃತರಾದಾಗ ರೂ. 1 ಲಕ್ಷ ಪರಿಹಾರ ನೀಡಲು ತೀರ್ಮಾನಿಸಲಾಯಿತು. ಹಾಗೂ ಮೀನುಗಾರಿಕೆ ನಡೆಸುವಾಗ ದೋಣಿಯಲ್ಲಿ (ನೀರಿನಲ್ಲಿ ಮುಳುಗದೇ) ಸಾವು ಸಂಭವಿಸಿದಲ್ಲಿ ರೂ. 2 ಲಕ್ಷ ಪರಿಹಾರ ನೀಡಲೂ ಸಹ ತೀರ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಡಿ ಅವಘಡಗಳಲ್ಲಿ ಸಿಲುಕಿದ ಮೀನುಗಾರರನ್ನು ರಕ್ಷಣೆ ಮಾಡಿದವರಿಗೆ ಶೌರ್ಯ ಪ್ರಶಸ್ತಿ ನೀಡುವುದರ ಜೊತೆಗೆ ರೂ. 50000ಗಳ ಪುರಸ್ಕಾರ ನೀಡಲು ಮಾನ್ಯ ಮೀನುಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದಲ್ಲದೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವು ಸಮುದ್ರದಲ್ಲಿ ಬೆಳಕು (Light) ಮೀನುಗಾರಿಕೆ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆ, ಅವೈಜ್ಞಾನಿಕವಾಗಿ ಪಚ್ಚಿಲೆ ಮೀನುಗಾರಿಕೆ, ಚೌರಿ ಮತ್ತು ಪ್ಲಾಸ್ಟಿಕ್ ಬಳಸಿ ಅನಧಿಕೃತವಾಗಿ ಕಪ್ಪೆ ಬಂಡಸನ್ನು ಹಿಡಿಯುವುದನ್ನು ಈಗಾಗಲೇ ನಿಷೇಧಿಸಿರುತ್ತದೆ. ಸಭೆಯಲ್ಲಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

(ಸಾಂದರ್ಭಿಕ ಚಿತ್ರ)

Comments are closed.