ತುಮಕೂರು: ವೋಟು ಹಾಕಲಿ ಎಂದೇ ಬಡ್ಡಿ ರಹಿತ ಸಾಲ ಕೊಡುತ್ತಿದ್ದೇವೆ. ಈ ಬಾರಿ ಪರಮೇಶ್ವರ್ ಅವರನ್ನು ಗೆಲ್ಲಿಸದೆ ಇದ್ದರೆ ನಿಮ್ಮ ವಿರುದ್ಧ ನಾವು ಕಠಿಣರಾಗಬೇಕಾಗುತ್ತದೆ ಎಂದು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹಣ ಪಡೆದವರ ಬಳಿ ಹೇಳಿದ್ದಾರೆ.
ಕೊರಟಗೆರೆಯಲ್ಲಿ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತಿತರ ಮುಖಂಡ ಸಮ್ಮುಖದಲ್ಲೇ ಹೇಳಿಕೆ ನೀಡಿದ್ದು, ಒಮ್ಮೆ ಪರಮೇಶ್ವರ್ ಅವರನ್ನು ಗೆಲ್ಲಿಸದೆ ಇದ್ದರೆ ನೀವ್ಯಾರೂ ಮತ್ತೆ ನಮ್ಮ ಬಳಿ ಬರಬಾರದು ಎಂದಿದ್ದಾರೆ.
ಚುನಾವಣಾ ಬಿಸಿ ಹೆಚ್ಚಾಗುತ್ತಿದೆ. ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮತದಾರರಿಗೆ ವಿವಿಧ ಆಮಿಷ ಒಡ್ಡಲಾಗುತ್ತಿದ್ದು ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಕ್ಷೇತ್ರ ಕೊರಟಗೆರೆ ಅತ್ಯುತ್ತಮ ಸಾಕ್ಷಿಯಾಗಿದೆ. ಪರಮೇಶ್ವರ್ ತಮ್ಮ ಕ್ಷೇತ್ರದಲ್ಲಿ ಗೆಲ್ಲಲು ಕೆಲವು ಸರ್ಕಾರಿ ಯೋಜನೆಗಳ ದುರುಪಯೋಗಪಡಿಸಿಕೊಳ್ಳುತ್ತಿದ್ದು ಅದರಲ್ಲಿ ಮುಖ್ಯವಾಗಿ ಡಿಸಿಸಿ ಬ್ಯಾಂಕ್ನಿಂದ ಬಡ್ಡಿ ರಹಿತ ಸಾಲ ಮಂಜೂರು ಮಾಡಿಸಿರುವುದು.
ಇಷ್ಟುದಿನ ಸಾಲ ಕೊಡಿ ಎಂದು ರೈತರು ಅಂಗಲಾಚಿದರೂ ಇಲ್ಲದ ಸಬೂಬು ಹೇಳಿ ವಾಪಸ್ ಕಳಿಸುತ್ತಿದ್ದ ಡಿಸಿಸಿ ಬ್ಯಾಂಕ್ನವರು ಇವತ್ತು ಅವರೇ ಕರೆದು ಕೊಡುತ್ತಿದ್ದಾರೆ. ಈಗಾಗಲೇ 900 ರೈತರು, 500ಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳಿಗೆ ಹಣ ನೀಡಿದ್ದಾರೆ.