ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಗಳು ಮಾರ್ಚ್ 1ರಿಂದ ಮಾ.17 ರವರೆಗೆ ನಡೆಯಲಿದ್ದು, ಕನಿಷ್ಠ ಹಾಜರಾತಿ ಪಡೆಯದ 3700 ಪಿಯು ವಿದ್ಯಾರ್ಥಿಗಳು ಈ ಬಾರಿಗೆ ಪರೀಕ್ಷೆ ಬರೆಯಲು ಅನರ್ಹರಾಗಿದ್ದಾರೆ. ಈ ಮೂಲಕ ಪರೀಕ್ಷೆಯಿಂದ ವಂಚಿತರಾಗ ಲಿದ್ದಾರೆ.
ಮೊದಲ ಹಂತದಲ್ಲಿ 1,700 ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಗಳು ಮಾಹಿತಿ ಕಳುಹಿಸಿ, ಕನಿಷ್ಠ ಹಾಜರಾತಿ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದೆ. ಇದರ ಹೊರತಾಗಿ, ಪ.ಪೂ ಶಿಕ್ಷಣ ಇಲಾಖೆ ಕೂಡ ಕನಿಷ್ಠ ಹಾಜರಾತಿ ಇಲ್ಲದವರ ಪಟ್ಟಿ ರೂಪಿಸುತ್ತಿದ್ದು, ಇದರಲ್ಲಿ 2 ಸಾವಿರ ವಿದ್ಯಾರ್ಥಿಗಳಿದ್ದಾರೆ.
ಕಳೆದ ವರ್ಷ 4,204 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅರ್ಹತೆ ಕಳೆದುಕೊಂಡಿದ್ದರು. ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ, ಪ್ರತಿ ವಿಷಯದಲ್ಲೂ ಕನಿಷ್ಠ ಶೇ.75 ಹಾಜರಾತಿ ಇರಬೇಕು. ಗೈರು ಹಾಜರಾತಿಯಿಂದ ಪರೀಕ್ಷೆ ಪ್ರವೇಶ ಕಳೆದುಕೊಂಡ ವಿದ್ಯಾರ್ಥಿಗಳು ಮುಂಬರುವ ಮರು ಪರೀಕ್ಚೆಗೂ ಹಾಜರಾಗುವಂತಿಲ್ಲ. 2019 ನೇ ಸಾಲಿನ ವಾರ್ಷಿಕ ಪರೀಕ್ಷೆವರೆಗೆ ಕಾಯಬೇಕಿದೆ.
ಸೂಚನೆ ನೀಡಿದರೂ ನಿರ್ಲಕ್ಷ್ಯ: ಪಿಯು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸೆಪ್ಟೆಂಬರ್ ನಿಂದ ಜನವರಿವರೆಗೂ ನಾಲ್ಕು ಬಾರಿ ಹಂತ ಹಂತವಾಗಿ ಕನಿಷ್ಠ ಹಾಜರಾತಿ ಬಗ್ಗೆ ಸೂಚನೆ ನೀಡಲಾಗಿದೆ. ಈ ವರ್ಷ ಪಾಲಕರ ವಿಳಾಸಕ್ಕೂ ಪತ್ರ ರವಾನೆಯಾಗಿತ್ತು. ಕೆಲವು ಖಾಸಗಿ ಕಾಲೇಜುಗಳಲ್ಲಿ ಪಾಲಕರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇಷ್ಟಾ ದರೂ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಪ.ಪೂ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.