ಕರ್ನಾಟಕ

ಕನ್ನಡದಲ್ಲೂ ಕರೀನಾ ನಟಿಸಬಹುದು!

Pinterest LinkedIn Tumblr


ಬೆಂಗಳೂರು: ಕರ್ನಾಟಕ ಮತ್ತು ಬೆಂಗಳೂರು ಕಪೂರ್‌ ಕುಟುಂಬಕ್ಕೆ ಅತ್ಯಂತ ವಿಶಿಷ್ಟವಾಗಿದೆ. ನನಗೆ ಕನ್ನಡ ಭಾಷೆ ಬರುವುದಿಲ್ಲ. ನಾನು ಒಂದು ದಿನ ನಿಮ್ಮ ಭಾಷೆಯ ಸಿನಿಮಾದಲ್ಲಿ ನಟಿಸುವ ಕಾಲ ಬರಬಹುದು ಎಂದು ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಕನ್ನಡ ಸಿನಿಮಾದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದರು.

ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆದ ಬೆಂಗಳೂರು 10ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ ನನ್ನ ರಕ್ತದಲ್ಲಿಯೇ ಬೆರೆತಿದೆ. ನಮ್ಮ ತಾತ ಬೆಂಗಳೂರು ಮೈಸೂರಿನ ಮೇಲೆ ಸಾಕಷ್ಟು ಪ್ರೀತಿ ಇಟ್ಟುಕೊಂಡಿದ್ದರು.

ಅವರು ನಮ್ಮೆಲ್ಲರಿಗೂ ನಕ್ಷತ್ರವಾಗಿ ಆಶೀರ್ವದಿಸುತ್ತಿದ್ದಾರೆ. ಚಿತ್ರರಂಗದಿಂದ ನಾನು ಸಾಕಷ್ಟು ಗೌರವಕ್ಕೆ ಪಾತ್ರಳಾಗಿದ್ದೇನೆ. ಸಿನಿಮಾ ಧರ್ಮವನ್ನೂ ಮೀರಿ ಎಲ್ಲರನ್ನೂ ಒಂದು ಕುಟುಂಬದಂತೆ ಒಂದುಗೂಡಿಸುವ ಶಕ್ತಿ ಹೊಂದಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ನನಗೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಖುಷಿ ತಂದಿದೆ ಎಂದು ಹೇಳಿದರು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ಬೆಂಗಳೂರು ಚಲನಚಿತ್ರೋತ್ಸವವನ್ನು ಮೈಸೂರಿನವರೆಗೂ ತೆಗೆದುಕೊಂಡು ಹೋಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು ಕನ್ನಡ ಚಿತ್ರರಂಗದ ಎಲ್ಲ ಬೇಡಿಕೆಗಳನ್ನೂ ಈಡೇರಿಸಿದ್ದಾರೆ. ಚಿತ್ರೋತ್ಸವದಲ್ಲಿ 50 ಆಸ್ಕರ್‌ ಪ್ರಶಸ್ತಿ ಪಡೆದ ಚಿತ್ರಗಳೂ ಸೇರಿದಂತೆ 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಆ ಚಿತ್ರಗಳನ್ನು ನೋಡಿ ಕನ್ನಡ ಚಿತ್ರಗಳು ವಿಶ್ವ ಮಟ್ಟಕ್ಕೆ ಬೆಳೆಸುವ ಕೆಲಸ ಆಗಲಿ ಎಂದರು. ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಮಾತನಾಡಿ, ರಾಜ್ಯ ಸರ್ಕಾರ ಸಿನಿಮಾ ರಂಗಕ್ಕೆ ಸಾಕಷ್ಟು ಸಹಾಯಧವನ್ನು ನೀಡುತ್ತಿದೆ. ಕನ್ನಡ ಚಿತ್ರಗಳು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ ಬಾಬು ಮಾತನಾಡಿ, ಮಾ. 6 ರಂದು ಮೈಸೂರು ಫಿಲ್ಮ್ ಸಿಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿ ಪೂಜೆ ಮಾಡಲಿದ್ದಾರೆ ಎಂದು ಹೇಳಿದರು. ಅಲ್ಲದೇ ಚಲನಚಿತ್ರ ರಂಗದಲ್ಲಿ ಜೀವನ ಶ್ರೇಷ್ಠ ಸಾಧನೆ ಮಾಡಿದ ಹಿರಿಯರಿಗೆ 10 ಲಕ್ಷ ರೂ. ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ನಾನು ಬೆಂಗಳೂರಿನ ಅಳಿಯ ನನ್ನ ಹೆಂಡತಿ ಭಾರತಿ ಬೆಂಗಳೂರಿನವಳು. ಜಗತ್ತಿನಲ್ಲಿ ಚಿತ್ರೋತ್ಸವವನ್ನು ಸರ್ಕಾರ ಬೆಂಬಲಿಸಿದ್ದು ಇದೇ ಮೊದಲು. ಚಿತ್ರಕಲೆ, ನಟನೆ, ಸಂಗೀತ ಎಲ್ಲವೂ ನಮ್ಮ ಪರಂಪರೆಯ ಭಾಗವಾಗಿಯೇ ಈಗ ಸಿನಿಮಾ ರಂಗವಾಗಿ ಮುಂದುವರೆಯುತ್ತಿದೆ.
-ರಾಕೇಶ್‌ ಓಂ ಪ್ರಕಾಶ್‌ ಮೆಹ್ರಾ, ಬಾಲಿವುಡ್‌ ನಿರ್ದೇಶಕ

ಇಲ್ಲಿನ ಜನರ ಸಿನಿಮಾ ಪ್ರೀತಿ ನೋಡಿ ನನಗೆ ಆಸ್ಕರ್‌ ಪ್ರಶಸ್ತಿ ಸಿಕ್ಕ ಹಾಗೆ ಖುಷಿಯಾಗಿದೆ. ವಿಶ್ವದ ಎಲ್ಲ ಚಿತ್ರಗಳನ್ನು ನೋಡಿ ಎಂಜಾಯ್‌ಮಾಡಿ
-ಮಾರ್ಕ್‌ ಬಾಸೆಟ್‌, ಫ್ರೆಂಚ್‌ ಚಿತ್ರ ನಿರ್ದೇಶಕ

ಸಿನಿಮಾ ಶಾಂತಿಯ ಶಾಲೆ ಇದ್ದ ಹಾಗೆ. ನಾವೆಲ್ಲರೂ ಸಿನಿಮಾ ಮೂಲಕ ಜನರನ್ನು ಪ್ರೀತಿಸುತ್ತೇವೆ. ಭಾರತ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ರಾಷ್ಟ್ರ. ಈ ಉತ್ಸವದ ಮೂಲಕ ಶಾಂತಿಯ ಸಂದೇಶ ಸಾರೋಣ.
-ಫಾತಿಮಾ ಮೋತ್‌ ಮೆದ್‌ ಆರ್ಯ, ಇರಾನಿ ನಟಿ

-ಉದಯವಾಣಿ

Comments are closed.