ಕರ್ನಾಟಕ

ಅಭ್ಯರ್ಥಿ ಪ್ರಕಟಿಸಿದ ಬೆನ್ನಲ್ಲೇ ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟ

Pinterest LinkedIn Tumblr

ಮೈಸೂರು: ಮುಂಬರುವ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. 126 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ ನಂಜನಗೂಡು ಮೀಸಲು ಕ್ಷೇತ್ರ ಹೊರತುಪಡಿಸಿ, ಉಳಿದ ಹತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಹಾಲಿ ಶಾಸಕ ಜಿ.ಟಿ.ದೇವೇಗೌಡ, ಕೆ.ಆರ್‌.ನಗರ ಕ್ಷೇತ್ರದ ಹಾಲಿ ಶಾಸಕ ಸಾ.ರಾ.ಮಹೇಶ್‌ ಅವರ ಹೆಸರಿದೆ.

ಇನ್ನು ಶಾಸಕ ಎಸ್‌.ಚಿಕ್ಕಮಾದು ನಿಧನದ ಹಿನ್ನೆಲೆಯಲ್ಲಿ ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣಗೆ ಟಿಕೆಟ್‌ ನೀಡಲಾಗಿದೆ. ಪಿರಿಯಾಪಟ್ಟಣ ಕ್ಷೇತ್ರಕ್ಕೆ ಮಹದೇವ್‌, ವರುಣಾ ಕ್ಷೇತ್ರಕ್ಕೆ ಅಭಿಷೇಕ್‌, ಚಾಮರಾಜ ಕ್ಷೇತ್ರಕ್ಕೆ ಪೊ›.ಕೆ.ಎಸ್‌.ರಂಗಪ್ಪ, ಕೃಷ್ಣರಾಜ ಕ್ಷೇತ್ರಕ್ಕೆ ಕೆ.ವಿ. ಮಲ್ಲೇಶ್‌, ನರಸಿಂಹರಾಜ ಕ್ಷೇತ್ರಕ್ಕೆ ಅಬ್ದುಲ್ಲಾ, ತಿ. ನರಸೀಪುರ ಕ್ಷೇತ್ರಕ್ಕೆ ಅಶ್ವಿ‌ನ್‌ ಕುಮಾರ್‌ ಅವರು ಗಳನ್ನು ಅಭ್ಯರ್ಥಿಗಳಾಗಿ ಪ್ರಕಟಿಸಲಾಗಿದೆ.

ಮೊದಲ ಪಟ್ಟಿ ಬಿಡುಗಡೆಗೊಂಡ ಬೆನ್ನಲ್ಲೇ ತಿ. ನರಸೀಪುರ, ನರಸಿಂಹರಾಜ ಹಾಗೂ ವರುಣಾ ಕ್ಷೇತ್ರದಲ್ಲಿ ಭಿನ್ನಮತ ಭುಗಿಲೆದ್ದಿದೆ. ತಿ.ನರಸೀಪುರ ಕ್ಷೇತ್ರದಲ್ಲಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮತ್ತು ಅವರ ಪುತ್ರ ಸುನೀಲ್‌ ಬೋಸ್‌ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್‌ನಿಂದ ಹೊರಬಂದಿದ್ದ ಮುಖಂಡರೇ ಇದೀಗ ಜೆಡಿಎಸ್‌ ನಾಯಕರ ನಡೆ ವಿರುದ್ಧ ತಿರುಗಿಬಿದ್ದಿದ್ದಾರೆ.

2013ರ ಚುನಾವಣೆಯಲ್ಲಿ ಮಹದೇವಪ್ಪ ಅವರಿಗೆ ತೀವ್ರ ಪೈಪೋಟಿ ನೀಡಿದ್ದ ಸುಂದರೇಶನ್‌ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಧರಣಿ ಸುಂದರೇಶನ್‌, ಅವರ ಪುತ್ರ, ಜಿಪಂ ಮಾಜಿ ಅಧ್ಯಕ್ಷ ಎಸ್‌.ಎನ್‌.ಸುಂದರೇಶನ್‌, ಪೊ›.ಎಚ್‌.ಗೋವಿಂದಯ್ಯ, ಎಸ್‌.ಶಂಕರ್‌, ಎಚ್‌.ವಾಸು, ಡಾ. ಬಿ.ಕೆ. ಜಾnನಪ್ರಕಾಶ್‌ ಅವರು ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು.

ಆದರೆ, ಜೆಡಿಎಸ್‌ ನಾಯಕರು ಆಕಾಂಕ್ಷಿಗಳಿಗೆ ಮಣೆ ಹಾಕದೆ ಜಿಪಂ ಸದಸ್ಯ ಅಶ್ವಿ‌ನ್‌ ಕುಮಾರ್‌ಗೆ ಟಿಕೆಟ್‌ ನೀಡಿರುವುದರ ಹಿಂದೆ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರಿಗೆ ತಮ್ಮ ಶಿಷ್ಯ ಮಹ ದೇವಪ್ಪ ಗೆಲ್ಲಲಿ ಎಂಬ ಸಹಾನುಭೂತಿ ಕೆಲಸ ಮಾಡಿದೆ. ಜತೆಗೆ ಅಶ್ವಿ‌ನ್‌ ಕುಮಾರ್‌ ಸಹ ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ಜತೆಗೆ ಸ್ನೇಹದಿಂದಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ಸಂಘಟನೆ ಪ್ರಬಲವಾಗಿದ್ದರೂ ಅಶ್ವಿ‌ನ್‌ ಕುಮಾರ್‌ಗೆ ಟಿಕೆಟ್‌ ಘೋಷಿಸಿರುವುದು ಕಾಂಗ್ರೆಸ್‌ ಪಕ್ಷಕ್ಕೆ ವರದಾನವಾಗಲಿದೆ ಎನ್ನುತ್ತಾರೆ ಟಿಕೆಟ್‌ ಆಕಾಂಕ್ಷಿಗಳು.

ಅಶ್ವಿ‌ನ್‌ ಕುಮಾರ್‌ ಹೊರತುಪಡಿಸಿ, ನಮ್ಮಲ್ಲೇ ಯಾರಿಗಾದರೂ ಟಿಕೆಟ್‌ ನೀಡುವಂತೆ ಆಗ್ರಹಿಸುತ್ತಿರುವುದಲ್ಲದೆ, ಆಕಾಂಕ್ಷಿಗಳ ಬೆಂಬಲಿಗರು ಕ್ಷೇತ್ರದಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಸುತ್ತಿರುವುದರಿಂದ ಜೆಡಿಎಸ್‌ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದ್ದು, ಜೆಡಿಎಸ್‌ ಮುಖಂಡರ ಈ ಸಾಮೂಹಿಕ ಬಂಡಾಯ ಪಕ್ಷದ ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದೆ. ಪಕ್ಷದಲ್ಲಿನ ಈ ಬೆಳವಣಿಗೆಗಳು ಜೆಡಿಎಸ್‌ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಈಗಾ ಗಲೇ ಅಶ್ವಿ‌ನ್‌ಗೆ ಜೆಡಿಎಸ್‌ ಟಿಕೆಟ್‌ ಘೋಷಣೆ ಯಾಗಿದೆ. ಈ ನಡುವೆ ಕೊನೆ ಕ್ಷಣದಲ್ಲಿ ಬದಲಾ ವಣೆಯಾದರೆ ಅಶ್ವಿ‌ನ್‌ ಕಾಂಗ್ರೆಸ್‌ನತ್ತ ಮುಖ ಮಾಡುವಂತಾದರೂ, ಇಲ್ಲ ನಿರ್ಧಾರ ಬದಲಾ ವಣೆಯಾಗದೆ ಅಶ್ವಿ‌ನ್‌ ಕಣದಲ್ಲಿ ಉಳಿದರೂ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಶಂಕರ್‌, ಧರಣಿ ಸುಂದ ರೇಶನ್‌, ಸಿದ್ಧಾರ್ಥ ಅವರುಗಳು ಕೈ ಅಥವಾ ಕಮಲಕ್ಕೆ ಬೆಂಬಲ ನೀಡಿದರೆ ಅಚ್ಚರಿಪಡುವಂತಿಲ್ಲ.

ಸದ್ಯಕ್ಕೆ ತಿ.ನರಸೀಪುರ ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗವಾಗಿದೆ. ಜತೆಗೆ ತಿ.ನರಸೀಪುರ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ವರುಣಾ ಕ್ಷೇತ್ರದ ಅಭ್ಯರ್ಥಿ ಅಭಿಷೇಕ್‌ ವಿರುದ್ಧ ಜೆಡಿಎಸ್‌ನ ಸ್ಥಳೀಯ ಮುಖಂಡರು ಬಂಡಾಯ ವೆದ್ದಿದ್ದಾರೆ. ಇನ್ನು ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ವಿಧಾನಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ಸಹೋದರ ಸಂದೇಶ್‌ ಸ್ವಾಮಿ ಅವರಿಗೆ ಟಿಕೆಟ್‌ ತಪ್ಪಿರುವುದಕ್ಕೆ ಪಕ್ಷದ ನಾಯ ಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತ ಬಿಜೆಪಿಯಲ್ಲಿ ಹಿಂದೊಮ್ಮೆ ಶಾಸಕರಾಗಿ ಪಕ್ಷದಿಂದ ಹೊರಹೋಗಿದ್ದ ಡಾ.ಭಾರತೀಶಂಕರ್‌ ಪ್ರಬಲ ಆಕಾಂಕ್ಷಿ. ಅವರ ಜತೆಗೆ ವಿಧಾನಪರಿಷತ್‌ ಮಾಜಿ ಸದಸ್ಯ ಸಿ.ರಮೇಶ್‌, ಸುಧಾ ಮಹ ದೇವಯ್ಯ, ಹಿಂದೆ ಡಾ.ಎಚ್‌.ಸಿ.ಮಹದೇವಪ್ಪ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಪಂ ಮಾಜಿ ಸದಸ್ಯ ಪುಟ್ಟಬಸವಯ್ಯ ಆಕಾಂಕ್ಷಿ ಗಳಾಗಿದ್ದಾರೆ. ಜೆಡಿಎಸ್‌ಪಕ್ಷದೊಳಗಿನ ಈ ಭಿನ್ನ ಮತ ಕಾಂಗ್ರೆಸ್‌ ಮತ್ತು ಬಿಜೆಪಿಗೆ ವರದಾನವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ.

* ಗಿರೀಶ್‌ ಹುಣಸೂರು

-ಉದಯವಾಣಿ

Comments are closed.