ಬೆಂಗಳೂರು: 2018-19ನೇ ಸಾರಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಾರಿಯ ಬಜೆಟ್ ನಲ್ಲಿ ಪತ್ರಕರ್ತರಿಗೂ ಮನ್ನಣೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್’ನ ಆಯವ್ಯಯ ಮಂಡನೆ ಮಾಡಿರುವ ಅವರು, ಮಾಧ್ಯಮ ಸಂಜೀವಿನ ಯೋಜನೆ ಆರಂಭಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ.
ಮಾಧ್ಯಮ ಸಂಜೀವಿನ ಯೋಜನೆಯಡಿಯಲ್ಲಿ ರೂ.ಕೋಟಿ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಾಣ, ಪತ್ರಿಕೆಗಳನ್ನು ಮನೆಮನೆಗೆ ಹಂಚುವವರ ಕ್ಷೇಮಾಭಿವೃದ್ಧಿಗೆ ರೂ.2 ಕೋಟಿ ಕ್ಷೇಮ ನಿಧಿ ಸ್ಥಾಪನೆ, ವೃತ್ತಿ ನಿರತ ಪತ್ರಕರ್ತರು ಅಪಘಾತಕ್ಕೆ ಒಳಗಾದರೆ ಮತ್ತು ಅಕಾಲಿಕ ಮರಣವನ್ನಪ್ಪಿದ ಸಂದರ್ಭದಲ್ಲಿ ರೂ.5 ಲಕ್ಷವರೆಗಿನ ಜೀವ ವಿಮೆ ನೀಡುವುದಾಗಿ ಘೋಷಿಸಿದ್ದಾರೆ.
ಇದಲ್ಲದೆ, ಈಗಾಗಲೇ ಪತ್ರಕರ್ತರಿಗೆ ನೀಡಲಾಗುತ್ತಿರುವ ರಾಜೀವ್ ಆರೋಗ್ಯ ಯೋಜನೆಯನ್ನು ಬಲವರ್ಧನೆಗೊಳಿಸಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
2018-19ನೇ ಸಾಲಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಒಟ್ಟಾರೆ ರೂ.239 ಕೋಟಿ ಮೀಸಲಿಡಲಾಗಿದ್ದು. ಕಳೆದ ವರ್ಷ 5 ವರ್ಷಗಳಲ್ಲಿ ಪತ್ರಕರ್ತರಿಗೆ ನೀಡಲಾಗುತ್ತಿರುವ ಮಾಸಾಶನವನ್ನು ರೂ.3 ಸಾವಿರದಿಂದ ರೂ.10 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಪತ್ರಕರ್ತರ ಪಾಲಿನ ಶುಲ್ಕವನ್ನು ಇಲಾಖೆಯೇ ಭರಿಸಲಿದ್ದು, ಮಾನ್ಯತೆ ಪಡೆದ ಜಿಲ್ಲಾ ಪತ್ರಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ವಿತರಿಸಲಾಗುತ್ತದೆ ಎಂದಿದ್ದಾರೆ.