ಕರ್ನಾಟಕ

ಫೆಬ್ರವರಿ 17ರಂದು ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ

Pinterest LinkedIn Tumblr


ಬೆಂಗಳೂರು: ಸದಾ ವಾಹನಗಳಿಂದ ಗಿಜಿಗಿಡುವ ನಗರದಲ್ಲಿ ಮಾಲಿನ್ಯ ನಿಯಂತ್ರಣ ಮಾಡಲು ರಾಜ್ಯ ಮುಂದಾಗಿದ್ದು, ಈ ನಿಟ್ಟಿನಲ್ಲಿ ಪರ್ಯಾಯ ಕ್ರಮಗಳನ್ನು ಕೈಗೊಂಡಿದೆ.

ಇದರ ಅಂಗವಾಗಿ ಇದೇ ಶನಿವಾರ ರಾಜ್ಯದಲ್ಲಿ ಮೊದಲ ಬಾರಿಗೆ ವಿದ್ಯುತ್‌ ಚಾಲಿನ ವಾಹನಗಳ ಸಂಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಲಿದ್ದಾರೆ.

ಹೆಚ್ಚುತ್ತಿರುವ ವಾಯು ಮಾಲಿನ್ಯ ತಡೆಯಲು ಜಾಗತಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯ ಸರಕಾರ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ದೇಶದಲ್ಲಿಯೇ ಮೊದಲ ಬಾರಿಗೆ ವಿದ್ಯುತ್‌ ಚಾಲಿತ ವಾಹನಗಳ ನೀತಿಯನ್ನು ಜಾರಿಗೆ ತರಲಾಗಿದೆ.

ಫೆ. 17ರಂದು ವಿಧಾನಸೌಧ ಮುಂಭಾಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 50 ವಿದ್ಯುತ್‌ ಚಾಲಿತ ಕಾರುಗಳ ಪ್ರದರ್ಶನ, ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ಈ ವಿನೂತನ ಕಾರ್ಯಕ್ರಮದ ಅಂಗವಾಗಿ ಅವರು, ವಿದ್ಯುತ್‍ಚಾಲಿತ 50 ಕಾರುಗಳಿಗೆ `ನಗರ ಪ್ರದಕ್ಷಿಣೆ’ಗೆ ಅವಕಾಶ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ನಗರದಲ್ಲಿರುವ ಕಾರ್ಪೊರೇಟ್ ಕಂಪನಿಗಳ ಸಿಬ್ಬಂದಿಗೆ ಇಂಥ 1,000 ವಿದ್ಯುತ್ ಚಾಲಿತ ಕಾರುಗಳು ಸೇವೆ ಒದಗಿಸಲಿವೆ.

ಇಡೀ ದೇಶದಲ್ಲಿ 2030ರ ಹೊತ್ತಿಗೆ ವಿದ್ಯುತ್ ಚಾಲಿತ ವಾಹನಗಳು ವ್ಯಾಪಕವಾಗಿ ಬಳಕೆಗೆ ಬರಬೇಕೆಂದು ಬಹುತೇಕ ಎಲ್ಲ ಸರಕಾರಗಳು ಯೋಜಿಸುತ್ತಿವೆ. ಕರ್ನಾಟಕ ಮೊದಲನೆಯದಾಗಿ ಇದನ್ನು ಜಾರಿಗೆ ತರುತ್ತಿದೆ.

ಈ ಕುರಿತು ಮಾತನಾಡಿದ, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್.ವಿ.ದೇಶಪಾಂಡೆ, ರಾಜ್ಯ ಸರಕಾರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿಟ್ಟಿದ್ದು, ವಿದ್ಯುತ್ ಚಾಲಿತ ವಾಹನಗಳು ಮತ್ತು ಇಂಧನ ಸಂರಕ್ಷಣೆ ನೀತಿ ರೂಪಿಸಿಸಿ ಜಾರಿಗೆ ತರಲಾಗಿದೆ. ಈ ಮೂಲಕ ಐಟಿ-ಬಿಟಿ ಸಿಟಿ ಎನ್ನುವ ಖ್ಯಾತಿಯ ಬೆಂಗಳೂರು ಇನ್ನುಮುಂದೆ ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯೂ ಆಗಲಿದೆ ಎಂದರು.

ದೇಶದಲ್ಲಿ ಎಲ್ಲರಿಗಿಂತ ಮೊದಲು ವಿದ್ಯುತ್ ಚಾಲಿತ ವಾಹನ ನೀತಿಯನ್ನು ಜಾರಿಗೆ ತಂದ ಹೆಗ್ಗಳಿಕೆ ರಾಜ್ಯದ್ದಾಗಿದೆ. ಈ ವಲಯಕ್ಕೆ ಮುಂಬರುವ ದಿನಗಳಲ್ಲಿ 35 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸುವುದು ನಮ್ಮ ಗುರಿಯಾಗಿದ್ದು, ಈ ವಲಯವು 50 ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸಲಿದೆ. ಇಲ್ಲಿ ಹೂಡಿಕೆ ಮಾಡುವವರಿಗೆ ಆಕರ್ಷಕ ಸೌಲಭ್ಯಗಳು ಮತ್ತು ರಿಯಾಯಿತಿಗಳು ಹಾಗೂ ಉತ್ತೇಜನಾ ಕ್ರಮಗಳು ಇರಲಿವೆ ಎಂದು ಸಚಿವರು ತಿಳಿಸಿದರು..

ಶನಿವಾರದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ವಿದ್ಯುತ್ ಚಾಲಿತ ವಾಹನಗಳಲ್ಲಿ 3-4 ಕಿಲೋ ಮೀಟರ್ ದೂರದ ಸವಾರಿಗೆ ಕೂಡ ಅವಕಾಶ ನೀಡಲಾಗುತ್ತಿದೆ. ವಿದ್ಯುತ್ ಚಾಲಿತ ವಾಹನಗಳಿಂದ ಮಾಲಿನ್ಯ ನಿವಾರಣೆಯ ಜೊತೆಗೆ ಮಿತವ್ಯಯವೂ ಸಾಧ್ಯವಾಗಲಿದೆ. ಜೊತೆಗೆ, ದೇಶದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಿರುವ ತೈಲ ಆಮದಿನ ವೆಚ್ಚವೂ ತಗ್ಗಲಿದೆ,’’ ಎಂದು ದೇಶಪಾಂಡೆ ಹೇಳಿದರು.

Comments are closed.