ಕರ್ನಾಟಕ

ಹಾಲಿ ಕಾಂಗ್ರೆಸ್‌ ಸರಕಾರದ ಕೊನೆಯ ಬಜೆಟ್‌ಗೆ ಕ್ಷಣಗಣನೆ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ, ಹಾಲಿ ಕಾಂಗ್ರೆಸ್‌ ಸರಕಾರದ ಕೊನೆಯ ಬಜೆಟ್‌ ಮಂಡನೆಗೆ ಅಂತಿಮ ಕಸರತ್ತು ಆರಂಭವಾಗಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಮಂಡಿಸುವ ಬಜೆಟ್‌ ಇದಾಗಿರುವುದರಿಂದ ಜನಪ್ರಿಯ ಯೋಜನೆಗಳಿಗೆ ಆದ್ಯತೆ ನೀಡಲೇ ಬೇಕಾಗಿದ್ದು, ಇವುಗಳಿಗೆ ಅನುದಾನ ಹೊಂದಾಣಿಕೆ ಮುಖ್ಯಮಂತ್ರಿಗಳ ಪಾಲಿಗೆ ದೊಡ್ಡ ಸವಾಲಾಗಿದೆ.

ಫೆ. 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಮಂಡಿಸಲಿದ್ದು, ಈ ಬಾರಿ ಬಜೆಟ್‌ ಗಾತ್ರ 2.10ಲ.ಕೋ.ರೂ. ಮೀರುವ ಸಾಧ್ಯತೆ ಇದೆ. ಚುನಾವಣೆ ಕಾರಣಕ್ಕಾಗಿ ಜನಪ್ರಿಯ ಕಾರ್ಯಕ್ರಮಗಳು ಘೋಷಣೆಯಾಗುವುದು ಖಚಿತವಾಗಿದ್ದು, ಇದರೊಂದಿಗೆ ರಾಜ್ಯ ಸರಕಾರದ ಸಾರ್ವತ್ರಿಕ ವಿಮಾ ಯೋಜನೆಗೂ ಅನುದಾನ ಒದಗಿಸಬೇಕಾಗುತ್ತದೆ. ಆದರೆ ಸರಕು ಮತ್ತು ಸೇವಾ ತೆರಿಗೆ ಜಾರಿಯಲ್ಲಿರುವುದರಿಂದ ಅದಕ್ಕೆ ತಕ್ಕಂತೆ ರಾಜ್ಯದ ಆದಾಯ ಹೆಚ್ಚಿಸಿಕೊಳ್ಳಲು ಸರಕಾರ ಅಬಕಾರಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನೇ ಹೆಚ್ಚಾಗಿ ನೆಚ್ಚಿಕೊಳ್ಳಬೇಕು. ಆದರೂ ಜನಪ್ರಿಯ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸಬೇಕಾದರೆ ಸಾಲದ ಪ್ರಮಾಣ ಹೆಚ್ಚಿಸುವುದು ಅನಿವಾರ್ಯ ಎನ್ನಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಆದಾಯ ಸಂಗ್ರಹ ಕುರಿತಂತೆ ಸಾಕಷ್ಟು ಗೊಂದಲ ಕಾಣಿಸಿಕೊಂಡರೂ ಇದೀಗ ಸಮಸ್ಯೆ ಬಹುತೇಕ ಬಗೆಹರಿದಿರುವುದರಿಂದ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗಿದ್ದು, ವರ್ಷದ ಕೊನೆಯ ಮೂರು ತಿಂಗಳಲ್ಲಿ ಆದಾಯ ಸಂಗ್ರಹ ಮತ್ತಷ್ಟು ಸುಧಾರಣೆ ಕಾಣುವ ಸಾಧ್ಯತೆ ಇದೆ. ಕೇಂದ್ರ ಸರಕಾರ ಜಿಎಸ್‌ಟಿ ನಷ್ಟವನ್ನು ಪೂರ್ಣ ಪ್ರಮಾಣದಲ್ಲಿ (ವಾರ್ಷಿಕ ಶೇ. 15ರಷ್ಟು ಪ್ರಮಾಣದಲ್ಲಿ ತೆರಿಗೆ ಏರಿಕೆ ಅಂದಾಜಿನಂತೆ) ನೀಡಿದರೆ ವರ್ಷಾಂತ್ಯಕ್ಕೆ ತೆರಿಗೆ ಸಂಗ್ರಹ ಗುರಿ 89,957 ಕೋ.ರೂ. ಮೀರಬಹುದು ಎಂದು ಅಂದಾಜಿಸಲಾಗಿದೆ.

-ಉದಯವಾಣಿ

Comments are closed.