ಕರ್ನಾಟಕ

ಜೆಡಿಎಸ್‌ – ಬಿಎಸ್ಪಿ 104: 20 ಒಪ್ಪಂದ

Pinterest LinkedIn Tumblr


ಬೆಂಗಳೂರು: ವಿಧಾನಸಭೆ ಮೈತ್ರಿ ರಾಜಕಾರಣ ಶುರುವಾಗಿದ್ದು, ಜೆಡಿಎಸ್‌-ಬಿಎಸ್‌ಪಿ ಮೊದಲ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್‌ ಹಾಗೂ ಬಿಎಸ್‌ಪಿ ಜತೆಗೂಡಿ ಚುನಾವಣೆ ಎದುರಿಸಲಿದ್ದು 224 ಕ್ಷೇತ್ರಗಳ ಪೈಕಿ ಬಿಎಸ್‌ಪಿಗೆ 14 ಜಿಲ್ಲೆಗಳಲ್ಲಿ 20 ಕ್ಷೇತ್ರ ಜೆಡಿಎಸ್‌ ಬಿಟ್ಟುಕೊಡಲಿದೆ.

ಜೆಡಿಎಸ್‌ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳ ಪರ ಮಾಜಿ ಪ್ರಧಾನಿ ಎಚ್‌. ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಜಂಟಿ ಪ್ರಚಾರ ನಡೆಸಲಿದ್ದಾರೆ. ದಲಿತ ಸಮುದಾಯದ ಮತ ಸೆಳೆಯುವ ನಿಟ್ಟಿನಲ್ಲಿ ಜೆಡಿಎಸ್‌ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ಈ ಸಮೀಕರಣ ಯಶಸ್ವಿಯಾಗುತ್ತಾ ಕಾದು ನೋಡಬೇಕಿದೆ.

ದೆಹಲಿಯಲ್ಲಿ ಗುರುವಾರ ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಆಲಿ ಹಾಗೂ ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಸತೀಶ್‌ಚಂದ್ರ ಮಿಶ್ರಾ , ಮೈತ್ರಿ ಅಧಿಕೃತವಾಗಿ ಘೋಷಿಸಿದ್ದಾರೆ. ನಂತರ ಮಾತನಾಡಿದ ಡ್ಯಾನಿಶ್‌ ಅಲಿ, ಜೆಡಿಎಸ್‌ ಹಾಗೂ ಬಿಎಸ್‌ಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಮಾಯಾವತಿ ಹಾಗೂ ದೇವೇಗೌಡರು ಚರ್ಚಿಸಿ ಈ ನಿರ್ಧಾರ ಮಾಡಿದ್ದಾರೆ ಎಂದರು.

14 ಜಿಲ್ಲೆಗಳ 20 ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ಪರ್ಧೆ ಮಾಡಲಿದೆ. ರಾಜ್ಯದ ಜನತೆ ಈ ಮೈತ್ರಿ ಒಪ್ಪಿ ಆರ್ಶೀವಾದ ಮಾಡಲಿದ್ದಾರೆ ಎಂದು ತಿಳಿಸಿದರು. ಚಾಮರಾಜನಗರದ ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ, ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌, ಬೆಳಗಾವಿಯ ನಿಪ್ಪಾಣಿ, ಚಿಕ್ಕೋಡಿ- ಸಡಲಗಾ, ರಾಯಬಾಗ, ದಾವಣಗೆರೆಯ ಹೊನ್ನಾಳಿ,

ಬೀದರ್‌ ಜಿಲ್ಲೆಯ ಬೀದರ್‌ ಉತ್ತರ, ಕಲಬುರಗಿಯ ಚಿತ್ತಾಪುರ, ಕಲಬುರಗಿ ಗ್ರಾಮೀಣ, ಬಳ್ಳಾ ರಿಯ ವಿಜಯನಗರ, ಬಾಗಲಕೋಟೆಯ ಬಾಗಲಕೋಟೆ ನಗರ, ಉಡುಪಿಯ ಕಾರ್ಕಳ, ಧಾರವಾಡ ಜಿಲ್ಲೆಯ ಹು-ಧಾ ಪೂರ್ವ, ಹಾವೇರಿಯ ಬ್ಯಾಡಗಿ, ಗದಗ ಜಿಲ್ಲೆಯ ಶಿರಹಟ್ಟಿ, ಗದಗ, ವಿಜಯಪುರದ ಬಬಲೇಶ್ವರ, ದಕ್ಷಿಣ ಕನ್ನಡದ ಸುಳ್ಯದಲ್ಲಿ ಬಿಸ್ಪಿ ಸ್ಪರ್ಧಿಸಲಿದೆ. ಈ 20 ಕ್ಷೇತ್ರಗಳಲ್ಲಿ 8 ಮೀಸಲು ಕ್ಷೇತ್ರಗಳಾಗಿವೆ.

ಎಡಪಕ್ಷಗಳ ಜತೆಯೂ ದೋಸ್ತಿ?: ಬಿಎಸ್‌ಪಿ ಅಷ್ಟೇ ಅಲ್ಲದೆ ಸಿಪಿಐ(ಎಂ) ಜತೆಯೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಬಾಗೇಪಲ್ಲಿ ಸೇರಿದಂತೆ ಎರಡು ಅಥವಾ ಮೂರು ಕ್ಷೇತ್ರ ಸಿಪಿಎಂಗೆ ಬಿಟ್ಟಕೊಡಲಿದೆ. ಎಡಪಕ್ಷಗಳ ಜತೆ ಮೈತ್ರಿಗೆ ಖುದ್ದು ಎಚ್‌.ಡಿ.ದೇವೇಗೌಡ ಆಸಕ್ತಿ ಹೊಂದಿದ್ದು, ದೆಹಲಿ ಮಟ್ಟದಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗಿದೆ.

-ಉದಯವಾಣಿ

Comments are closed.