ಕರ್ನಾಟಕ

ಬಸ್ಸಿನ ಅಡಿ ಶವ ಎಳೆದು ತಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಆ್ಯಕ್ಸಿಡೆಂಟ್ ಕುರಿತು ಚಾಲಕನ ತಪ್ಪೊಪ್ಪಿಗೆ

Pinterest LinkedIn Tumblr


ಬೆಂಗಳೂರು: ಬಸ್ ನಡಿ ಶವ ಎಳೆದು ತಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಚಾಲಕ ತಾನೇ ಅಪಘಾತ ಮಾಡಿ ಬಸ್ ನಿಲ್ಲಿಸದೇ ಬಂದಿದ್ದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು, ಶಾಂತಿನಗರ ಒಂದನೇ ಡಿಪೋದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿ ಶವ ಪ್ರಕರಣ, ತಾನೇ ಅಪಘಾತ ಮಾಡಿರುವುದಾಗಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಮೊಯಿನುದ್ದೀನ್ ಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ಬಸ್ ನಿಲ್ಲಿಸದೆ ಬಸ್ ಚಾಲಕ ಮೊಯಿನುದ್ದೀನ್ ಬಸ್ ಚಲಾಯಿಸಿಕೊಂಡು ಬಂದಿದ್ದು. ಸಂಶಯದ ಮೇರೆಗೆ ಆತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಚಾಲಕ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಭಯದಿಂದಾಗಿ ಬಸ್ ನಿಲ್ಲಿಸದೇ ಬಸ್ ಚಲಾಯಿಸಿಕೊಂಡು ಬಂದಿದ್ದೆ ಎಂದು ಹೇಳಿಕೊಂಡಿದ್ದಾನೆ.

ವಿಚಾರಣೆ ವೇಳೆ ತಾನು ಅಪಘಾತ ಮಾಡಿರುವುದು ನಿಜ, ಅಪಘಾತವಾದ ತಕ್ಷಣ ಬಸ್ ನಿಲ್ಲಿಸದೆ ಚಲಾಯಿಸಿಕೊಂಡು ಹೋದೆ, ಪೊಲೀಸರಿಗೆ ಭಯ ಪಟ್ಟು ತಿಳಿಸದೆ ಮನೆಗೆ ಹೋಗಿದ್ದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಚಾಲಕ ಮೊಯಿನುದ್ದೀನ್ ರಾತ್ರಿ 12.30 ರ ಸುಮಾರಿಗೆ ರಾಮನಗರ ಮತ್ತು ಚನ್ನಪಟ್ಟಣ ಮಧ್ಯೆ ಅಪಘಾತ ಮಾಡಿದ್ದು. ಬಳಿಕ ಚಾಲಕ ಬಸ್ ನಿಲ್ಲಿಸದೆ ಬೆಂಗಳೂರಿಗೆ ಬಂದಿದ್ದಾನೆ. ಕೊನೆಯ ನಿಲ್ದಾಣವಾದ ಶಾಂತಿನಗರದಲ್ಲಿ ಪ್ರಯಾಣಿಕರೆಲ್ಲಾ ಇಳಿದ ಬಳಿಕ ಚಾಲಕ ಬಸ್ ಡಿಪೋದ ಬಳಿ ಬಸ್ ನ ಕೆಳಗೆ ನೋಡಿದಾಗ ವ್ಯಕ್ತಿಯ ಶವ ಇರುವುದನ್ನು ಕಂಡಿದ್ದಾನೆ, ವ್ಯಕ್ತಿಯ ದೇಹದಲ್ಲಿ ಸಂಪೂರ್ಣ ತರಚಿದ ಗಾಯಗಳಾಗಿತ್ತು. ಬಳಿಕ ಸಿಕ್ಕಿ ಬೀಳುತ್ತೇನೆ ಎಂದು ಆತಂಕದಲ್ಲಿ ಬಸ್ ಅನ್ನು ಡಿಪೋದ ಒಳಗೆ ತೆಗೆದುಕೊಂಡು ಹೋಗಿದ್ದು, ಬಸ್ ಕೆಳಗೆ ಸಿಲುಕಿದ್ದ ಶವ ಕೆಳಗೆ ಬಿದ್ದಿದೆ. ಬಳಿಕ ಶವವನ್ನು ಇತರ ಎರಡು ಬಸ್ ಗಳ ನಡುವೆ ಹಾಕಿ ಹೋಗಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

ಇನ್ನು ಪ್ರಸ್ತುತ ದೊರೆತಿರುವ ವ್ಯಕ್ತಿಯ ಮೃತದೇಹದ ಗುರುತು ಪತ್ತೆಯಾಗಿಲ್ಲವಾದರೂ, ರಾತ್ರಿ ವೇಳೆಯಾಗಿದ್ದರಿಂದ ತಾಲಕನಿಗೂ ಅಪಘಾತ ನಡೆದ ಸ್ಥಳ ಯಾವುದು ಎಂದು ತಿಳಿದಿಲ್ಲ, ಘಟನೆ ನಡೆದ ಸ್ಥಳವನ್ನು ಪತ್ತೆ ಹಚ್ಚಿ ಪ್ರಕರಣವನ್ನು ಅಲ್ಲಿನ ಠಾಣೆಗೆ ವರ್ಗಾಯಿಸುವುದುಆಗಿ ವಿಲ್ಸನ್ ಗಾರ್ಡ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಚಾಲಕನ ಮೇಲೆ ಅಪಘಾತ, ಸಾಕ್ಷ್ಯ ನಾಶಕ್ಕೆ ಯತ್ನ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಬಂಧಿಸಿದ್ದಾರೆ. ಅಲ್ಲದೆ ಆರೋಪಿಯನ್ನು ಮೂರು ದಿನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

Comments are closed.