ರಾಷ್ಟ್ರೀಯ

ಹುಟ್ಟುಹಬ್ಬಕ್ಕೆ ನಾನು ಮನೆಗೆ ಬರ್ತೀನಿ ಎಂದು ತಂಗಿಗೆ ಹೇಳಿದ್ದ ಹುತಾತ್ಮ ಯೋಧ ಕ್ಯಾಪ್ಟನ್ ಕುಂದು

Pinterest LinkedIn Tumblr

ಜಮ್ಮು: ನಿನ್ನೆ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ ಹುತಾತ್ಮನಾದ ಭಾರತೀಯ ಯೋಧ 22 ವರ್ಷದ ಕ್ಯಾಪ್ಟನ್ ಕಪಿಲ್ ಕುಂದು ಇದೇ ತಿಂಗಳ 10ರಂದು ತನ್ನ ಹುಟ್ಟುಹಬ್ಬಕ್ಕೆ ಮನೆಗೆ ಬರುವವರಿದ್ದರು.

ಹರ್ಯಾಣ ರಾಜ್ಯದ ಗುರುಗ್ರಾಮ ಜಿಲ್ಲೆಯ ಪಟೌಡಿ ಸಮೀಪ ಹಳ್ಳಿಯೊಂದರ ನಿವಾಸಿ ಕ್ಯಾಪ್ಟನ್ ಕುಂದು ಸೇರಿದಂತೆ ಸೇನೆಯ ನಾಲ್ವರು ನಿನ್ನ ಜಮ್ಮುವಿನ ಪೂಂಚ್ ಮತ್ತು ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಭಾರೀ ಗುಂಡಿನ ದಾಳಿಗೆ ಎದೆಯೊಡ್ಡಿ ಹುತಾತ್ಮರಾಗಿದ್ದಾರೆ.

ಇದೀಗ ಕ್ಯಾಪ್ಟನ್ ಕಪಿಲ್ ಕುಂಡು ಮನೆಯಲ್ಲಿ ದುಃಖ ಮಡುಗಟ್ಟಿದೆ. ಆತನ ತಾಯಿ ಸುನಿತಾಗೆ ದುಃಖವನ್ನು ತಡೆಯಲಾಗುತ್ತಿಲ್ಲ, ತನ್ನ ಮಗ ಯಾವತ್ತೂ ಸಾಹಸದ ಕೆಲಸ ಮಾಡಲು ಮನಸ್ಸು ತೋರುತ್ತಿದ್ದ ಎನ್ನುತ್ತಾರೆ. ಅವನ ಹುಟ್ಟುಹಬ್ಬಕ್ಕೆ ಮನೆಗೆ ಬರುವವನಿದ್ದನು. ಅವನು ಊರಿಗೆ ಯಾವಾಗಲೂ ಅಚ್ಚರಿಯ ಭೇಟಿ ನೀಡುತ್ತಿದ್ದ. ಆತನ ಸೋದರಿಗೆ ಮೊದಲು ತಾನು ಊರಿಗೆ ಬರುವ ವಿಷಯ ಹೇಳುತ್ತಿದ್ದ. ಕಳೆದ ವರ್ಷ ನವೆಂಬರ್ ನಲ್ಲಿ ಊರಿಗೆ ಬಂದಿದ್ದ ಎಂದು ತಾಯಿ ದುಃಖಿಸುತ್ತಾ ಹೇಳುತ್ತಾರೆ.

ಕ್ಯಾಪ್ಟನ್ ಕುಂದುವಿಗೆ ಜೀವನದಲ್ಲಿ ಧೈರ್ಯ, ಸಾಹಸಗಳನ್ನು ಮಾಡಬೇಕೆಂಬ ಆಸೆಯಿತ್ತು. ಪ್ರಕೃತಿಯನ್ನು ತುಂಬಾ ಇಷ್ಟಪಡುತ್ತಿದ್ದ. ದೇಶಭಕ್ತಿ ಕೂಡ ಅವನಲ್ಲಿ ಹೆಚ್ಚಾಗಿತ್ತು. ದೇಶದ ಬಗ್ಗೆ ತನ್ನ ಕಾಳಜಿಯನ್ನು ಪದ್ಯಗಳನ್ನು ಬರೆಯುವ ಮೂಲಕ ತೋರಿಸುತ್ತಿದ್ದ. ದೇಶವೇ ಎಲ್ಲಕ್ಕಿಂತ ಮುಖ್ಯ ಎಂದು ಹೇಳುತ್ತಿದ್ದ ಎಂದು ಕುಟುಂಬ ಸದಸ್ಯರು ಹೇಳುತ್ತಾರೆ.

ಇಲ್ಲಿನ ಗ್ರಾಮಸ್ಥರು ಸಿಟ್ಟಿನಿಂದ ಪಾಕಿಸ್ತಾನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸರ್ಕಾರ ಸರಿಯಾದ ಉತ್ತರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಕ್ಯಾಪ್ಟನ್ ಕುಂದುವಿನ ಸೋದರಿ, ನಾನು ಫೆಬ್ರವರಿ 10ರಂದು ಊರಿಗೆ ಬರುತ್ತೇನೆ, ಯಾರಿಗೂ ಹೇಳಬೇಡ, ಅಮ್ಮನಿಗೆ ಅಚ್ಚರಿಯಾಗಬೇಕೆಂದು ಹೇಳಿದ್ದ ಎಂದು ಅಳುತ್ತಾ ಹೇಳುತ್ತಾಳೆ.

Comments are closed.