ಕರಾವಳಿ

ಸುಗಮ ವಾಹನ ಸಂಚಾರಕ್ಕೆ “ಇ‌ಆರ್‌ಪಿ” ಅಗತ್ಯ : ದೇಶದ ಪ್ರಥಮ ಯೋಜನೆಗೆ ದ.ಕ.ಜಿಲ್ಲಾಧಿಕಾರಿ ಚಿಂತನೆ

Pinterest LinkedIn Tumblr

ಮಂಗಳೂರು ಫೆಬ್ರವರಿ 5: ಸ್ಮಾರ್ಟ್ ಸಿಟಿಯಾಗುತ್ತಿರುವ ಮಂಗಳೂರಿನಲ್ಲಿ ಸುಗಮ ವಾಹನ ಸಂಚಾರ ಹಾಗೂ ಪಾದಚಾರಿಗಳ ಸಂಚಾರಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸುವ ನಿಟ್ಟಿನಲ್ಲಿ ನಗರದೊಳಗೆ ಖಾಸಗಿ ವಾಹನಗಳಿಗೆ (ಸಾರ್ವಜನಿಕ ಸಾರಿಗೆ) ಇಲೆಕ್ಟ್ರಾನಿಕ್ ರೋಡ್ ಪ್ರೈಸ್ (ಇಲೆಕ್ಟ್ರಾನಿಕ್ ರಸ್ತೆ ದರ- ಇ ಆರ್ ಪಿ) ಅನುಷ್ಠಾನಕ್ಕೆ ದ.ಕ. ಜಿಲ್ಲಾ ಶಶಿಕಾಂತ್ ಸೆಂಥಿಲ್ ಚಿಂತನೆ ನಡೆಸಿದ್ದಾರೆ.

ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ನಿಗಮದ ( ಆರ್ ಟಿ ಎ) ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಂಗಳೂರಿನಲ್ಲಿ ಸುಗಮ ವಾಹನ ಸಂಚಾರ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗಲು ನಗರದೊಳಗೆ ಖಾಸಗಿ ವಾಹನಗಳಿಗೆ ಇ ಆರ್ ಪಿ ( ಇಲೆಕ್ಟ್ರಾನಿಕ್ ರಸ್ತೆ ಶುಲ್ಕ)ಯನ್ನು ಅಳವಡಿಸಲು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಅಭಿವೃದ್ಧಿ ಹೊಂದುತ್ತಿರುವ ಮಂಗಳೂರು ನಗರದಲ್ಲಿ ದಿನೇ ದಿನೇ ವಾಹನ ದಟ್ಟನೆ ಹೆಚ್ಚುತ್ತಿದ್ದು, ನಗರದೊಳಗೆ ಪಾದಚಾರಿಗಳಿಗೆ ನಡೆದಾಡಲು ಕಷ್ಟ ಸಾಧ್ಯವಾಗುತ್ತಿದೆ. ಇದಕ್ಕಾಗಿ ಪದೇ ಪದೇ ರಸ್ತೆ ಅಗಲಗೊಳಿಸುವ ಬದಲು ಅನಗತ್ಯವಾಗಿ ಖಾಸಗಿ ವಾಹನಗಳು ನಗರದೊಳಗೆ ಓಡಾಡುವುದನ್ನು ತಪ್ಪಿಸಲು ಇಆರ್ಪಿ ವ್ಯವಸ್ಥೆ ಜಾರಿಗೊಳಿಸುವುದು ಅಗತ್ಯವಾಗಿದೆ.

ವಿದೇಶಗಳಲ್ಲಿ ಈ ವ್ಯವಸ್ಥೆ ಚಾಲ್ತಿಯಲ್ಲಿದ್ದು ಇದರ ಮೂಲಕ ನಗರದ ನಿರ್ದಿಷ್ಟ ಪ್ರದೇಶದೊಳಗೆ ಖಾಸಗಿ ವಾಹನಗಳ ಪ್ರವೆಶದ ಸಂದರ್ಭದಲ್ಲಿ ಮಾಲಕರ ಎಟಿಎಂ ಕಾರ್ಡ್‍ನಿಂದ ನಿಗದಿತ ದರ ಕಡಿತಗೊಳ್ಳಲಿದೆ ಎಂದು ತಿಳಿಸಿದರು. ಇದರಿಂದ ಸಾರಿಗೆ ವ್ಯವಸ್ಥೆಯು ಯಾವುದೇ ಅಡಚಣೆ ಇಲ್ಲದೇ ಸುಗಮವಾಗಿ ಸಾಗಲು ಸಾಧ್ಯವಿದ್ದು ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರಯತ್ನವನ್ನು ಮಾಡಿ ಮಾದರಿ ಜಿಲ್ಲೆಯಾಗಿಸಲು ಪ್ರಯತ್ನ ನಡೆಸಿ ಇದರ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಶೀಘ್ರವೇ ಸಭೆ ನಡೆಸಲಾಗುವುದು. ಯಾವ ಖಾಸಗಿ ವಾಹನ ಗಳಿಗೆ, ಯಾವ ಪ್ರದೇಶಗಳಲ್ಲಿ, ಯಾವ ರೀತಿಯಲ್ಲಿ ದರ ನಿಗದಿಪಡಿಸಬೇಕೆಂಬ ಸೂಕ್ತ ಸಲಹೆ ಸೂಚನೆಗಳ ಮೇರೆಗೆ ಹಂತ ಹಂತವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಇರಾದೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಸ್ತುತ ಈ ವ್ಯವಸ್ಥೆ ನಮ್ಮ ದೇಶದಲ್ಲಿ ಇಲ್ಲ. ಮಂಗಳೂರಿನಲ್ಲಿ ಈ ವ್ಯವಸ್ಥೆ ಜಾರಿಯಾದಲ್ಲಿ ಇದೊಂದು ಮಾದರಿ ಆಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿದೆ. ಈ ಯೋಜನೆಗೆ ಯಾವುದೇ ರೀತಿಯ ಹೂಡಿಕೆಯ ಅಗತ್ಯವಿಲ್ಲ. ಬದಲಾಗಿ ಈ ಇಲೆಕ್ಟ್ರಾನಿಕ್ ವ್ಯವಸ್ಥೆಗೆ ಸೂಕ್ತವಾದ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದಾಯಿತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಬಸ್ಸಿನ ಸಮಸ್ಯೆಯಿದ್ದು ಅದನ್ನು ನಿವಾರಿಸಲು ಆದಷ್ಟು ಶೀಘ್ರವಾಗಿ ಸ್ಪಂದಿಸಿ ಖಾಸಗಿತನಕ್ಕೆ ಹೆಚ್ಚಿನ ಒತ್ತನ್ನು ನೀಡದೇ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.

ಈ ಸಂದರ್ಭ ಜಿಲ್ಲೆಯಲ್ಲಿನ ಬಸ್ಸುಗಳ ಸಮಸ್ಯೆಯ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಅಹವಾಲನ್ನು ಸ್ವೀಕರಿಸಿದರು. ಕೇವಲ ಪ್ರಾದೇಶಿಕ ಸಾರಿಗೆಯ ಸಮಸ್ಯೆಯಿದ್ದಲ್ಲಿ ಆರ್‍ಟಿಎ ಸಭೆಗಾಗಿ ಕಾಯದೇ ಯಾವುದೇ ಸಮಸ್ಯೆಗಳು ಎದುರಾದಲ್ಲಿ ನೇರವಾಗಿ ತಮ್ಮನ್ನು ಭೇಟಿಯಾಗಲು ತಿಳಿಸಿದರು.

ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನರ್ಮ್ ಬಸ್ ಸೇವೆಯ ಕುರಿತು ಖಾಸಗಿ ಬಸ್ಸಿನ ಮಾಲಕರು ಕೋರ್ಟ್ ಮೆಟ್ಟಿಲೇರಿದ್ದನ್ನು ಸಾರ್ವಜನಿಕರೊಬ್ಬರು ಪ್ರಸ್ತಾಪಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಯಾವುದೇ ನ್ಯಾಯಾಲಯಕ್ಕೂ ಹೋದರೂ ತಾವು ಸಾರ್ವಜನಿಕರ ಬೆಂಬಲಕ್ಕೆ ನಿಂತು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯಿತ್ತರು.

ಸಭೆಯಲ್ಲಿ ಅಪಾರ ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ, ವಕೀಲರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.