ಬೆಳಗಿನ ಜಾವ ಬೇಗನೆ ಎದ್ದು, ಮನೆಗೆಲಸವನ್ನೆಲ್ಲಾ ಮಾಡಿ, ಅಡುಗೆ ಮಾಡಿ, ಮಕ್ಕಳನ್ನ ಶಾಲೆಗೆ ಸಿದ್ದ ಮಾಡಿ ಕಳಿಸಿ, ಪತಿಗೆ ಡಬ್ಬಿಯಲ್ಲಿ ಊಟವನ್ನ ಕಟ್ಟಿ ಕಚೇರಿಗೆ ಕಳಿಸುವಷ್ಟರಲ್ಲಿ ಗೃಹಿಣಿಯರಿಗೆ ನಕ್ಷತ್ರಗಳು ಕಾಣಿಸುತ್ತಿರುತ್ತವೆ. ಈ ಕಾರಣಕ್ಕಾಗಿ ಗೃಹಿಣಿಯರು ಈ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿದ ಮೇಲೆ, ಮಕ್ಕಳು ಶಾಲೆಯಿಂದ ವಾಪಸ್ ಬರುವುದರ ಒಳಗೆ ಒಂದು ರೌಂಡ್ ನಿದ್ದೆ ಮಾಡಿ ವಿಶ್ರಮಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇದರಿಂದ ದೇಹಕ್ಕೆ ಆಗುವ ಅನುಕೂಲ_ ಅನಾನೂಕೂಲ ಏನೆಂಬುದು ನಿಮಗೆ ಗೊತ್ತೇ? ಇಲ್ಲಿವೆ ನೋಡಿ.
೧. ಜ್ಞಾಪಕ ಶಕ್ತಿ ವೃದ್ಧಿಸುತ್ತದೆ
ಇತ್ತೀಚಿಗಷ್ಟೇ ನಡೆಸಿದ ಅಧ್ಯಯನದಲ್ಲಿ ಯಾರೆಲ್ಲಾ ಪ್ರತಿದಿನ ಮಧ್ಯಾಹ್ನ 10,20 ಅಥವಾ 30 ನಿಮಿಷಗಳ ಕಾಲ ಮಲಗುವುದರಿಂದ ಜ್ಞಾಪಕ ಶಕ್ತಿ ಚುರುಕಾಗುತ್ತದೆ ಎಂಬುದು ತಿಳಿದು ಬಂದಿದೆ. ಈ ಅಧ್ಯಯನದಲ್ಲಿ 20 ನಿಮಿಷಗಳಿಗಿಂತ ಹೆಚ್ಚು ನಿದ್ದೆ ಮಾಡುವವರು ಎದ್ದೊಡನೆ ಸ್ವಲ್ಪ ತೂಕಡಿಕೆ ವ್ಯಕ್ತಪಡಿಸಿ ನಂತರ ಚುರುಕಾದರೆ, 10 ನಿಮಿಷಗಳ ಸಣ್ಣ ನಿದ್ದೆ ಮಾಡುವವರಲ್ಲಿ ಎದ್ದೊಡನೆ ಜ್ಞಾಪಕ ಶಕ್ತಿ ಮತ್ತು ಕಾಗ್ನಿಟಿವ್ ಸ್ಕಿಲ್ (ಅರಿವಿನ ಕೌಶಲ್ಯತೆ) ಹೆಚ್ಚು ಚುರುಕಾಗುವ ಲಕ್ಷಣಗಳು ಗೋಚರಿಸಿದವು ಎಂಬುದು ತಿಳಿದು ಬಂದಿದೆ.
೨. ರಕ್ತದೊತ್ತಡ ಕಡಿಮೆ ಮಾಡುತ್ತದೆ
ಬೆಳಕಿರುವ ಸಮಯದಲ್ಲಿ ಮಲಗಿದರೆ ಹೃದಯ ರಕ್ತನಾಳದ ಮೇಲೆ ಕಡಿಮೆ ಒತ್ತಡ ಬೀಳುವುದರಿಂದ, ರಕ್ತದೊತ್ತಡವು ಕಡಿಮೆ ಆಗುತ್ತದೆ.
೩. ನಿಮ್ಮ ನರಗಳಿಗೆ ಆರಾಮ ನೀಡುತ್ತದೆ
ಯೂನಿವರ್ಸಿಟಿ ಆಫ್ ಬರ್ಕ್ಲಿ ಅಲ್ಲಿ ನಡೆದ ಸಂಶೋಧನೆ ಪ್ರಕಾರ ಮಧ್ಯಾಹ್ನದ ಹೊತ್ತು 90 ನಿಮಿಷಗಳ ಕಾಲ ಮಲಗುವುದರಿಂದ ನಿಮಗೆ ದೇಹಕ್ಕೆ ಮತ್ತು ಚಿತ್ತಕ್ಕೆ ಆರಾಮ ಸಿಗುತ್ತದೆ ಎಂಬುದು ತಿಳಿದು ಬಂದಿದೆ.
೪. ನಿಮ್ಮ ಜಾಗರೂಕತೆ ಹೆಚ್ಚಿಸುತ್ತದೆ
ಅಮೆರಿಕಾದ ನಾಸಾ ಸಂಸ್ಥೆಯಲ್ಲಿ ಮಿಲಿಟರಿ ಪೈಲಟ್ ಮತ್ತು ಗಗನಯಾತ್ರಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ, 40 ನಿಮಿಷ ಅವಧಿಯ ನಿದ್ದೆಯು ಅವರ ಕಾರ್ಯಕ್ಷಮತೆಯನ್ನ 37% ಅಷ್ಟು ಹೆಚ್ಚು ಮಾಡಿದರೆ, ಅವರ ಜಾಗರೂಕತೆಯನ್ನ 100% ಅಷ್ಟು ಹೆಚ್ಚು ಮಾಡುತ್ತದೆ ಎಂಬುದು ತಿಳಿದು ಬಂದಿದೆ.
೫. ಸೃಜನಶೀಲತೆ ಹೆಚ್ಚಿಸುತ್ತ್ತದೆ
ಇದು ನಿಮ್ಮ ಜ್ಞಾಪಕ ಶಕ್ತಿ ಮತ್ತು ಗ್ರಹಣ ಶಕ್ತಿಯನ್ನ ಹೆಚ್ಚಿಸುವುದಷ್ಟೇ ಅಲ್ಲದೆ, ಅದರ ಪರಿಣಾಮವಾಗಿ ನಿಮ್ಮ ಸೃಜನಶೀಲತೆ ಕೂಡ ಹೆಚ್ಚಿಸುತ್ತದೆ.
೬. ಇಚ್ಚಾಶಕ್ತಿ ಹೆಚ್ಚಿಸುತ್ತದೆ
ಮನೋಶಾಸ್ತ್ರದ ಪ್ರಕಾರ ನೀವು ನಿದ್ದೆಯ ಕೊರತೆ ಎದುರಿಸುತ್ತಿದ್ದರೆ, ನಿಮ್ಮ ಮೆದುಳಿಗೆ ಅಡಚಣೆಗಳನ್ನ ನಿರ್ಲಕ್ಷಿಸುವುದು ಮತ್ತು ನಿಮ್ಮ ಚಿತ್ತವನ್ನ ನಿಯಂತ್ರಣದಲ್ಲಿ ಹಿಡಿದುಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ನೀವು ಮಧ್ಯಾಹ್ನದ ಹೊತ್ತು ಮಲಗಿ ಎದ್ದರೆ, ನಿಮ್ಮ ಮೆದುಳು ಅಡಚಣೆಗಳನ್ನ ನಿರ್ಲಕ್ಷಿಸಿ ಗುರಿಯ ಕಡೆ ಮಾತ್ರ ನೀವು ನೋಡುವಂತೆ ಮಾಡಿ, ನಿಮ್ಮ ಇಚ್ಚಾಶಕ್ತಿಯನ್ನ ಹೆಚ್ಚಿಸುತ್ತದೆ.