ಕರ್ನಾಟಕ

ಮೋದಿಯಿಂದ ಬೆಂಗಳೂರಿನಲ್ಲಿ ಮತ್ತೆ `ಪ್ರಾಮೀಸ್ ಟೂತ್ ಪೇಸ್ಟ್’ ಮಾರಾಟ: ಪ್ರಕಾಶ್ ರೈ ವ್ಯಂಗ್ಯ

Pinterest LinkedIn Tumblr

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್‍ಡಿಎ ಸರ್ಕಾರದ ವಿರುದ್ಧ ನಟ ಪ್ರಕಾಶ್ ರೈ ಮತ್ತೊಮ್ಮೆ ಟ್ವೀಟ್ ಮಾಡಿದ್ದು, ಮೋದಿ ಅವರು ಭಾನುವಾರ ಪರಿವರ್ತನಾ ಯಾತ್ರೆಯಲ್ಲಿ ಮಾಡಿದ ಭಾಷಣವನ್ನು ಟೀಕಿಸಿ ವ್ಯಂಗ್ಯವಾಡಿದ್ದಾರೆ.

2014ರಲ್ಲಿ ಮಾರಾಟವಾದ ಪ್ರಾಮಿಸ್ ಟೂತ್ ಪೇಸ್ಟ್ ಹಲ್ಲುಜ್ಜಲು ಮರೆತುಬಿಟ್ಟಿದೆ. ನನ್ನ ದೇಶದ ತೊಂದರೆಗೀಡಾದ ರೈತರು ಮತ್ತು ಉದ್ಯೋಗವಿಲ್ಲದ ಯುವಕರ ಮುಖದಲ್ಲಿ ನಗು ಮೂಡಿಸುವಲ್ಲಿ ವಿಫಲವಾಗಿದೆ. ನಿನ್ನೆ ಕರ್ನಾಟಕ ರ್ಯಾಲಿಯಲ್ಲಿ ಮಾರಾಟ ಮಾಡಲಾದ ಪ್ರಾಮಿಸ್ ಟೂತ್ ಪೇಸ್ಟ್ ನಲ್ಲಿ ನಿಮಗೆ ನಂಬಿಕೆಯಿದೆಯೇ? ನೀಡಿದ್ದ ಭರವಸೆಗಳನ್ನು ಅದು ಈಡೇರಿಸುತ್ತದೆಯೇ, ಸುಮ್ಮನೆ ಕೇಳಿದೆ ಅಷ್ಟೆ ಎಂದು ಟ್ವೀಟ್ ಮಾಡಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಜನರಿಗೆ ಮತ್ತೆ ಆಶ್ವಾಸನೆಗಳನ್ನು ನೀಡುವ ಮೂಲಕ ಮತ್ತೆ ಪ್ರಾಮಿಸ್ ಟೂತ್‍ಪೇಸ್ಟ್ ಮಾರಾಟ ಮಾಡುತ್ತಿದ್ದಾರೆ. ಇದು ಜನರ ಮುಖದಲ್ಲಿ ನಗು ಮೂಡಿಸುತ್ತದಾ ಎಂದು ಪ್ರಶ್ನಿಸಿದ್ದಾರೆ.

ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೇಶವು ಪ್ರಗತಿಯ ಪಥದಲ್ಲಿ ಸಾಗುತ್ತಿದ್ದರೆ, ಕರ್ನಾಟಕ ಅಭಿವೃದ್ಧಿಯ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ. ರಾಜ್ಯದಲ್ಲಿ ರಾಜಕೀಯ ಕೊಲೆಗಳ ಸಂಖ್ಯೆ ಹೆಚ್ಚಾಗಿದೆ. ಈ ಬಾರಿ ಬಿಜೆಪಿಗೆ ಮತ ಹಾಕುವ ಮೂಲಕ ಬಿಎಸ್ ಯಡಿಯೂರಪ್ಪ ಮುಂದಾಳತ್ವದಲ್ಲಿ ರಾಜ್ಯವನ್ನು ಅಭಿವೃದ್ಧಿಯ ಪರ ಸಾಗಬೇಕಿದೆ ಎಂದು ಹೇಳಿದ್ದರು.

ಈ ಹಿಂದೆಯೂ ನಟ ಪ್ರಕಾಶ್ ರೈ ತಾನು ಮೋದಿ, ಅಮೀತ್ ಶಾ ಮತ್ತು ಅನಂತ್‍ಕುಮಾರ್ ಹೆಗ್ಡೆ ವಿರೋಧಿ. ನನ್ನ ಪ್ರಕಾರ ಇವರು ಹಿಂದೂಗಳಲ್ಲ ಎಂದು ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಹೇಳಿದ್ದರು.

Comments are closed.