ರಾಷ್ಟ್ರೀಯ

ಪತಿಯ ದೈಹಿಕ – ಮಾನಸಿಕವಾಗಿ ಕಿರುಕುಳದಿಂದ ಬೇಸತ್ತು ಟ್ವಿಟ್ಟರ್ ನಲ್ಲಿ ಪೊಲೀಸರ ಮೊರೆ ಹೋದ ಪತ್ನಿ!

Pinterest LinkedIn Tumblr

ಮುಂಬೈ: ಪತಿಯ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ವಿಡಿಯೋ ಮಾಡಿ ಟ್ವಿಟ್ಟರ್ ಮೂಲಕ ಪೊಲೀಸರ ಸಹಾಯ ಕೇಳಿದ ಘಟನೆಯೊಂದು ಮುಂಬೈನ್ ಖಾರ್ ನಲ್ಲಿ ನಡೆದಿದೆ.

ಮಹಿಳೆಯ ಪತಿ ಅಟೋಮೊಬೈಲ್ ಉದ್ಯಮಿ ಆಗಿದ್ದು, ಈತನ ಕಿರುಕುಳದಿಂದ ಮುಕ್ತಿ ಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಹಿಳೆಯ ವಿಡಿಯೋವನ್ನ ಚಿತ್ರತಯಾರಕ ಅಶೋಕ್ ಪಂಡಿತ್ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲೇನಿದೆ?: ನನ್ನ ಪತಿಯಿಂದ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದೇನೆ. ಆತ ನನಗೆ ಹಲವು ವರ್ಷಗಳಿಂದ ಕಿರುಕುಳ ನೀಡುತ್ತಲೇ ಬಂದಿದ್ದಾನೆ. ನನ್ನ ಮಕ್ಕಳಿಗೋಸ್ಕರ ನಾನು ಅವನ ಜೊತೆ ಬದುಕುತ್ತಾ ಇದ್ದೀನಿ. ಆದ್ರೆ ಆತ ನನಗೆ ಪ್ರತಿನಿತ್ಯ ತೊಂದರೆ ಕೊಡುವುದರಿಂದ ನನ್ನ ಬದುಕನ್ನು ನಾಶ ಮಾಡ್ತಿದ್ದಾನೆ ಅಂತ ಮಹಿಳೆ ವಿಡಿಯೋ ಮೂಲಕ ಕಣ್ಣೀರು ಹಾಕಿದ್ದಾರೆ.

ಅಲ್ಲದೇ ಈ ಕುರಿತು ನಾನು ಈಗಾಗಲೇ ಪತಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇನೆ. ಆದ್ರೆ ಪೊಲೀಸರು ಇದೂವರೆಗೂ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಅವರು ಆರೋಪಿಸಿದ್ದಾರೆ.

ಹೀಗಾಗಿ ಆತನ ಕಿರುಕುಳದಿಂದ ನನಗೆ ಮುಕ್ತಿ ದೊರಕಿಸಿ ಕೊಡಿ. ಇದರಿಂದ ನನಗೆ ನ್ಯಾಯ ಸಿಗಲಿಲ್ಲವೆಂದರೆ ನಾಳೆಯೇ ನಾನು ಖಾರ್ ನಲ್ಲಿ ಬೀದಿಗೆ ಬೀಳುತ್ತೇನೆ. ಹೀಗಾಗಿ ದಯವಿಟ್ಟು ನನಗೆ ನ್ಯಾಯ ದೊರಕಿಸಿ ಕೊಡಿ ಎಂದು ಮಹಿಳೆ ಬೇಡಿಕೊಂಡಿದ್ದಾರೆ.

ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಮಹಿಳೆ ಮತ್ತು ಆಕೆಯ ಪತಿಯ ನಡುವಿನ ಕೌಟುಂಬಿಕ ಕಲಹ ಇದಕ್ಕೆ ಕಾರಣ ಅಂತ ಹೇಳಿದ್ದಾರೆ.

ಈ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದು, ಇವರು ಮುಂಬೈನ ಖಾರ್ ಪ್ರದೇಶದಲ್ಲಿರೋ ಡೂಪ್ಲೆಕ್ಸ್ ಅಪಾರ್ಟ್ ವೊಂದರಲ್ಲಿ ವಾಸವಾಗಿದ್ದಾರೆ. ಇದರಲ್ಲಿ ಪತಿ ಮತ್ತು ಇಬ್ಬರು ಮಕ್ಕಳು 11 ಫ್ಲೋರ್ ನಲ್ಲಿ ವಾಸವಾಗಿದ್ರೆ, ಹೆಣ್ಣು ಮಗಳೊಂದಿಗೆ ಪತ್ನಿ 12ನೇ ಮಹಡಿಯಲ್ಲಿ ಇದ್ದಾರೆ. ಇತ್ತೀಚೆಗಷ್ಟೇ ಮಹಿಳೆ ಪತಿಯ ವಿರುದ್ಧ 2 ದೂರು ದಾಖಲು ಮಾಡಿದ್ದಾರೆ. ಅದರಲ್ಲಿ ಒಂದು ಮನೆ ಇಬ್ಭಾಗ ಮಾಡಿದ್ದಕ್ಕಾದ್ರೆ ಇನ್ನೊಂದು ಬೆದರಿಕೆಗಾಗಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Comments are closed.