ಕರ್ನಾಟಕ

ತುಮಕೂರಿನ ಆಪರೇಷನ್ ಚಿರತೆ ಸಕ್ಸಸ್; ಮನೆಯೊಂದರ ಕಿಚನ್​ನಲ್ಲಿ ಅಡಗಿತ್ತು ಚೀತಾ

Pinterest LinkedIn Tumblr


ತುಮಕೂರು: ನಗರದ ಜಯನಗರದ ಮನೆಯೊಂದಕ್ಕೆ ಶನಿವಾರ ನುಗ್ಗಿ ಅಡಗಿ ಕುಳಿತು ಆತಂಕ ಸೃಷ್ಟಿಸಿದ್ದ ಚಿರತೆಯನ್ನೂ ಸೆರೆ ಹಿಡಿಯಲಾಗಿದೆ. ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸಂಜೆ 6.20ಕ್ಕೆ ಅರಿವಳಿಕೆ ಮದ್ದು ನೀಡಿ ವಶಕ್ಕೆ ಪಡೆದಿದ್ದಾರೆ.

ನಿತ್ರಾಣಗೊಂಡಿರುವ ಚಿರತೆಯನ್ನು ಬೋನಿನಲ್ಲಿ ಹಾಕಿ ಬನ್ನೇರುಘಟ್ಟ ಮೃಗಾಲಯಕ್ಕೆ ರವಾನಿಸುವ ಸಾಧ್ಯತೆ ಇದೆ. ಬೋನಿಗೆ ಸಾಗಿಸಲು ಅರಣ್ಯಾಧಿಕಾರಿಗಳು ಚಿರತೆಯನ್ನು ಎಳೆದಾಡಿದ್ದು, ಪ್ರಾಣಿಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಇದಕ್ಕೂ ಮೊದಲು ಮಧ್ಯಾಹ್ನ 2 .10 ಗಂಟೆಗೆ ಮನೆಯ ಮಾಲೀಕರಾದ ನಿವೃತ್ತ ನೌಕರ ರಂಗನಾಥ್ ಪತ್ನಿ ವನಜಾಕ್ಷಿ ಹಾಗೂ ಸೊಸೆ ವಿನುತಾ ಅವರು ರಕ್ಷಣೆ ಪಡೆದಿದ್ದ ಬಾತ್ ರೂಂ ಕಿಟಕಿ ಮುರಿದು ರಕ್ಷಿಸಲಾಗಿತ್ತು. ಬೆಳಗ್ಗೆ ಚಿರತೆ ಮನೆಗೆ ನುಗ್ಗಿದಾಗ ಹೆದರಿ ಬಾತ್ ರೂಂ ಸೇರಿಕೊಂಡಿದ್ದರು. ನಂತರ ಚಿರತೆ ಮನೆಯೊಂದರ ಕೋಣೆಯಲ್ಲಿ ಅಡಗಿ ಕುಳಿತಿತ್ತು.

ಒಂದು ಹಂತದಲ್ಲಿ ಚಿರತೆ ಮನೆಯೊಳಗೆ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡಿತ್ತು. ಮನೆಯ ಸದಸ್ಯರನ್ನು ರಕ್ಷಿಸುವ ಕಾರ್ಯ ಬೆಳಗ್ಗೆಯಿಂದಲೇ ನಡೆದರೂ ಚಿರತೆಯನ್ನು ಸುಲಭವಾಗಿ ಸೆರೆ ಹಿಡಿಯುವ ದೃಷ್ಟಿಯಿಂದ 7 ಗಂಟೆಗೆ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದರು. ಒಂದು ಗಂಟೆ ಮುಂಚಿತವಾಗಿ ಆಪರೇಷನ್ ಚಿರತೆ ಆರಂಭಿಸಿ ಬಲೆಗೆ ಬೀಳಿಸಲಾಗಿದೆ. ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ಎನ್ ಜಿಒ ಸದಸ್ಯರೂ ಹಾಜರಿದ್ದರು. ಕುತೂಹಲಕ್ಕೆ ಬಡಾವಣೆಯಲ್ಲಿ ನೂರಾರು ಜನರು ಬೆಳಗ್ಗೆಯಿಂದಲೇ ಜಮಾಯಿಸಿದ್ದರು.

ಚಿರತೆ ಕಾಣಿಸಿಕೊಂಡ ಸುದ್ದಿ ತಿಳಿದ ತಕ್ಷಣ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಚಿರತೆ ಮೊದಲು ಬನಶಂಕರಿ ವಾಚರ್​ ಗೋವಿಂದ್​ ರಾಜು ಎಂಬುವರ ಮೇಲೆ ಎರಗಿತ್ತು. ಅದೃಷ್ಟವಶಾತ್ ಸಣ್ಣಪುಟ್ಟ ಗಾಯದಿಂದ ಅವರು ಬಚಾವ್ ಆಗಿದ್ದರು. ಕಾರ್ಯಾಚರಣೆಗೆ ಡ್ರೋಣ್​ ಕ್ಯಾಮರಾ ಬಳಸಲು ಚಿಂತಿಸಲಾಗಿತ್ತು.

Comments are closed.