
ಬೆಂಗಳೂರು: ರಸ್ತೆಯ ಮೇಲೆ ಕಸ ಎಸೆದ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ಇಲ್ಲಿನ ಪಿಇಎಸ್ ಕಾಲೇಜು ಬಳಿ ಕೊಲೆಯಾಗಿದ್ದಾನೆ.
ವೃತ್ತಿಯಿಂದ ಚಾಲಕನಾಗಿದ್ದ ದೇವರಾಜ್ ಎಂಬ ಯುವಕ ಕೊಲೆಯಾದ ದುರ್ದೈವಿ. ಸ್ನೇಹಿತರ ಜತೆ ವಾಸವಿದ್ದ ದೇವರಾಜ್ ತಡರಾತ್ರಿ ತಾನು ವಾಸವಾಗಿದ್ದ ಕಟ್ಟಡದ ಮೇಲಿಂದ ಕಸ ತುಂಬಿದ ಕವರ್ ಒಂದನ್ನ ಕೆಳಕ್ಕೆ ಎಸೆದಿದ್ದಾರೆ. ಕಸ ಎಸೆದಿದ್ದರ ಬಗ್ಗೆ ಅಲ್ಲಿಯೇ ನಿಂತಿದ್ದ ಯುವಕರು ದೇವರಾಜ್ರನನ್ನು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಮೂವರು ಯುವಕರು ಹಾಗೂ ದೇವರಾಜ್ ಮಧ್ಯ ಮಾತಿನಚಕಮಕಿ ಪ್ರಾರಂಭವಾಗಿದೆ.
ಮಾತು ತೀವ್ರ ಸ್ವರೂಪ ಪಡೆದುಕೊಂಡು ನಂತರ ಹಲ್ಲೆಗೆ ತಿರುಗಿದೆ. ಯುವಕರು ಹಲ್ಲೆ ಮಾಡಿ, ದೇವರಾಜ್ನನ್ನು ಕಟ್ಟಡದ ಮೇಲಿಂದ ಕೆಳಕ್ಕೆ ತಳ್ಳಿದ್ದಾರೆ. ಮೇಲಿಂದ ಬಿದ್ದ ದೇವರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆಯೇ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಗಿರಿನಗರ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಡಿಸಿಪಿ ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕೊಲೆ ಮಾಡಿ ಪರಾರಿಯಾದ ಯುವಕರಿಗಾಗಿ ಶೋಧ ನಡೆಸುತ್ತಿದ್ದಾರೆ.
ಮೃತ ದೇವರಾಜ್ ಕೆಲ ವರ್ಷಗಳಿಂದ ಅಂಬುಲೆನ್ಸ್ ಚಾಲಕನಾಗಿದ್ದ. ಈ ಹಿಂದೆ ಹೃದಯವನ್ನು ಶಸ್ತ್ರ ಚಿಕಿತ್ಸೆಗಾಗಿ ಅಂಬುಲೆನ್ಸ್ನಲ್ಲಿ ಚೆನೈಗೆ ತೆಗೆದುಕೊಂಡು ಹೋಗಿದ್ದರು.
Comments are closed.