ಕರ್ನಾಟಕ

ದೀಪಕ್‌, ಬಶೀರ್‌ ಹತ್ಯೆ ಖಂಡಿಸಿ ಪ್ರತಿಭಟನೆ

Pinterest LinkedIn Tumblr


ಬೆಂಗಳೂರು: ಮಂಗಳೂರು ಸಮೀಪದ ಕಾಟಿಪಳ್ಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ದೀಪಕ್‌ ರಾವ್‌ ಹತ್ಯೆ ಖಂಡಿಸಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ನಗರದಲ್ಲಿ ಧರಣಿ ನಡೆಸಿದ ಬಿಜೆಪಿ, ರಾಜ್ಯದಲ್ಲಿ ಹೆಚ್ಚುತ್ತಿರುವ ಹತ್ಯೆ ಪ್ರಕರಣಗಳ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ದೀಪಕ್‌ ರಾವ್‌ ಹತ್ಯೆ ಜತೆಗೆ ಬಷೀರ್‌ ಹತ್ಯೆಯನ್ನೂ ಖಂಡಿಸಿದರು. ರಾಜ್ಯದ ಕಾಂಗ್ರೆಸ್‌ ಸರ್ಕಾರ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೂ-ಮುಸ್ಲಿಮರಲ್ಲಿ ವೈಷಮ್ಯದ ವಿಷಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.

ನಮ್ಮ ಹೋರಾಟ ಜಿಹಾದಿ ಶಕ್ತಿಗಳು ಮತ್ತು ಅವುಗಳಿಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧವೇ ಹೊರತು ಮುಸ್ಲಿಮರ ವಿರುದ್ಧ ಅಲ್ಲ. ರಾಜ್ಯಾದ್ಯಂತ ಹಿಂದೂ-ಮುಸ್ಲಿಮರು ಸಾಮರಸ್ಯದಿಂದ ಇದ್ದಾರೆ. ಆದರೆ, ಜಿಹಾದಿ ಶಕ್ತಿಗಳು ಈ ಸಾಮರಸ್ಯ ಹಾಳು ಮಾಡಲು ಹಿಂದೂಗಳ ಮೇಲೆ ದಾಳಿ, ಹತ್ಯೆಯಂತಹ ಕೃತ್ಯಗಳನ್ನು ಎಸಗುತ್ತಿವೆ. ಇವುಗಳಿಗೆ ಸರ್ಕಾರ ಕುಮ್ಮಕ್ಕು ನೀಡುವ ರೀತಿ ವರ್ತಿಸುತ್ತಿದೆ ಎಂದು ದೂರಿದರು.

ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯತ್ತಿದ್ದರೂ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುತ್ತಿರುವುದು ಹೊರತುಪಡಿಸಿ ಬೇರೆ ಯಾವುದೇ ಸಚಿವರು ಹೇಳಿಕೆ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿಗೆ ಅವರ ಸಂಪುಟ ಸದಸ್ಯರೂ ಬೇಸತ್ತಿದ್ದಾರೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಸರ್ಕಾರಕ್ಕೆ ಮಾನ, ಮರ್ಯಾದೆ, ಜನರ ಬಗ್ಗೆ ಕಳಕಳಿ ಇದ್ದಲ್ಲಿ ದೀಪಕ್‌ರಾವ್‌ ಮತ್ತು ಬಷೀರ್‌ ಹತ್ಯೆ ಖಂಡಿಸುವುದರ ಜತೆಗೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಜಿಹಾದಿ ಸಂಘಟನೆಗಳು ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿರುವುದರ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದ್ದರೆ ಆಡಳಿತಾರೂಢ ಕಾಂಗ್ರೆಸ್‌, ಬಿಜೆಪಿ ಮುಸ್ಲಿಮರ ವಿರುದ್ಧ ಹೋರಾಟ ನಡೆಸುತ್ತಿದೆ ಎಂದು ಸುಳ್ಳು ಹೇಳಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದೆ. ನಾವು ಯಾವತ್ತೂ ಮುಸ್ಲಿಮರ ವಿರುದ್ಧ ಇಲ್ಲ ಎಂಬುದು ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಸಂದರ್ಭದಲ್ಲಿ ಗೊತ್ತಾಗಿದೆ. ಇದನ್ನು ಆ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದರು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕವನ್ನು ಕೊಲೆಗಡುಕರ ರಾಜ್ಯವಾಗಿ ಮಾಡುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫ‌ಲವಾಗಿದೆ. ಜಿಹಾದಿ ಸಂಘಟನೆಗಳನ್ನು ಬೆಂಬಲಿಸುತ್ತಾ ಹಿಂದೂ-ಮುಸ್ಲಿಮರನ್ನು ಪರಸ್ಪರ ಎತ್ತಿಕಟ್ಟುತ್ತಿದೆ. ಇದರ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಎನ್‌.ರವಿಕುಮಾರ್‌, ಶಾಸಕರಾದ ಸಿ.ಟಿ.ರವಿ, ಸತೀಶ್‌ ರೆಡ್ಡಿ, ಬಿ.ಎನ್‌.ವಿಜಯಕುಮಾರ್‌, ವಿಧಾನ ಪರಿಷತ್‌ ಸದಸ್ಯರಾದ ವಿ.ಸೋಮಣ್ಣ, ಬಿ.ಜೆ.ಪುಟ್ಟಸ್ವಾಮಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

-ಉದಯವಾಣಿ

Comments are closed.