ಕರ್ನಾಟಕ

ಸಾಲ ಬಾಧೆ, ಪತ್ನಿ ಬಿಟ್ಟು ಹೋಗಿದ್ದರಿಂದ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಸಾಲ ಬಾಧೆ ಹಾಗೂ ಪತ್ನಿ ಬಿಟ್ಟು ಹೋಗಿದ್ದರಿಂದ ಬೇಸರಗೊಂಡ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾಗಿರುವ ಘಟನೆ ಶುಕ್ರವಾರ ರಾತ್ರಿ ಕುರುಬರಹಳ್ಳಿಯಲ್ಲಿ ನಡೆದಿದೆ. ರಾಜೇಶ್‌ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕುರುಬರಹಳ್ಳಿಯಲ್ಲಿ ತಾಯಿ ಹಾಗೂ ಸಹೋದರನ ಜತೆ ನೆಲೆಸಿರುವ ರಾಜೇಶ್‌ ಖಾಸಗಿ
ಕಂಪೆನಿಯಲ್ಲಿ ಮಾರ್ಕೆಟಿಂಗ್‌ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಫೈನಾನ್ಸ್‌ವೊಂದರ ಮಾಲೀಕ ಕಿರಣ್‌ ಎಂಬಾತ
ನಿಂದ 25 ಸಾವಿರ ರೂ. ಸಾಲ ಪಡೆದಿದ್ದ ರಾಜೇಶ್‌, ಅದನ್ನು ಸರಿಯಾದ ಸಮಯಕ್ಕೆ ತೀರಿಸಿರಲಿಲ್ಲ. ಇದರಿಂದ
ಕಿರಣ್‌ ಆಗಾಗ್ಗೆ ಮನೆ ಬಳಿ ಬಂದು ರಾಜೇಶ್‌ ಹಾಗೂ ಕುಟುಂಬ ಸದಸ್ಯರಿಗೆ ಹಣ ನೀಡುವಂತೆ ಒತ್ತಾಯಿಸುತ್ತಿದ್ದ.

ಜತೆಗೆ ರಾಜೇಶ್‌ ನಂದಿನಿ ಎಂಬಾಕೆಯನ್ನು ಕೆಲ ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಆದರೆ, ಇತ್ತೀಚೆಗೆ ಆತನಿಂದ ನಂದಿನಿ ಸಹ ದೂರ ಹೋಗಿದ್ದರು. ಮದುವೆ ವಿಚಾರ ಮನೆಯವರಿಗೆ ರಾಜೇಶ್‌ ಹೇಳಿರಲಿಲ್ಲ. ಈ
ವಿಚಾರಗಳಿಂದ ನೊಂದಿದ್ದ ರಾಜೇಶ್‌, ಕಿರಣ್‌ ಹಾಗೂ ಪತ್ನಿ ನಂದಿನಿ ವಿರುದ್ಧ ಸುಮಾರು 2.40 ನಿಮಿಷಗಳ ಕಾಲ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಲ್ಫಿ ವಿಡಿಯೋದಲ್ಲೇನಿದೆ?: “ಫೈನಾನ್ಸ್‌ ನಿಂದ ಯಾರು ಸಾಲ ತೆಗೆದುಕೊಳ್ಳಬೇಡಿ. ಫೈನಾನ್ಸಿಯರ್‌ ಕಿರಣ್‌, ಚೆಕ್‌ ಹಾಗೂ ದಾಖಲೆಗಳಿಗೆ ಸಹಿ ಮಾಡಿದವನು ನಾನು. ನನ್ನ ಕುಟುಂಬಕ್ಕೆ ತೊಂದರೆ ಕೊಡಬೇಡ’ ಎಂದಿದ್ದಾನೆ.

ನಂದಿನಿ ವಿಚಾರವಾಗಿ “ಹೇ, ನಂದಿನಿ ನಿನ್ನನ್ನು ಎಷ್ಟೆಲ್ಲ ನಂಬಿದೆ. ತುಂಬಾ ಟ್ರೈ ಮಾಡೆದೆಕಣೇ. ಕೊನೆವರೆಗೂ ಜತೆಯಲಿ ಇರ್ತಿನಿ ಅಂತಾ ಹೇಳಿ ಅರ್ಧಕ್ಕೆ ಬಿಟ್ಟು ತುಂಬಾ ಮೋಸ ಮಾಡಿಬಿಟ್ಟೆ. ಡೈವರ್ಸ್‌ ಪಡೆಯೋ ಅಗತ್ಯನೇ ಇಲ್ಲ ಬಿಡು ಎಂದಿದ್ದಾನೆ.

ಅಮ್ಮ ಸಾರಿ. ಐ ಆ್ಯಮ್‌ ವೇರಿ ಸಾರಿ. ಮಾನಸಿಕವಾಗಿ, ದೈಹಿಕವಾಗಿ ಏನಾಗುತ್ತಿದೆ ಎಂದು ನನಗೇ ಗೊತ್ತಾಗುತ್ತಿಲ್ಲ. ಅಮ್ಮ ಕ್ಷಮಿಸಿ ಬಿಡು. ಪ್ರದೀಪ್‌ ಅಮ್ಮನನ್ನು ಚೆನ್ನಾಗಿ ನೋಡಿಕೋ. ಯಾವುದೇ ಕಾರಣಕ್ಕೂ ನಂದಿನಿ ಹಾಗೂ ಆಕೆಯ ಕುಟುಂಬವನ್ನು ನಾನು ಕ್ಷಮಿಸಲ್ಲ. ಎಲ್ಲರಿಗೂ ಬಾಯ್‌ ಎಂದು ನೇಣಿಗೆ ಶರಣಾಗಿದ್ದಾನೆ.

ಮಹಾಲಕ್ಷ್ಮೀ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಉದಯವಾಣಿ

Comments are closed.