ಕರ್ನಾಟಕ

ಮಾತೃಭಾಷಾ ಶಿಕ್ಷಣ ನೀತಿ ರೂಪಿಸಲು ಸರ್ಕಾರ ಬದ್ಧ: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

ಮೈಸೂರು: ಮಾತೃಭಾಷಾ ಶಿಕ್ಷಣ ನೀತಿ ರೂಪಿಸಲು ಸರ್ಕಾರ ಬದ್ಧವಾಗಿದೆ. ಈ ನೀತಿ ಜಾರಿಗೆ ತರಲು ಇರುವ ಕಾನೂನು ತೊಡಕು ನಿವಾರಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶುಕ್ರವಾರ ಒತ್ತಾಯಿಸಿದರು.

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಂವಿಧಾನಕ್ಕೆ ತಿದ್ದುಪಡಿ ತಂದು ಮಾತೃಭಾಷೆ ಶಿಕ್ಷಣ ಜಾರಿಗೆ ಅನುವುಮಾಡಿಕೊಡುವಂತೆ ಕೋರಿ ಕೇಂದ್ರಕ್ಕೆ ಎರಡು ಬಾರಿ ಪತ್ರ ಬರೆಯಲಾಗಿದೆ. ಮುಂದಿನ ಬಾರಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲೂ ಒತ್ತಾಯಿಸಲಾಗುವುದು ಎಂದರು.

ಅನ್ನದ ಭಾಷೆಯಾದರೆ ಮಾತ್ರ ಕನ್ನಡ ಉಳಿಯುತ್ತದೆ. ಇದು ಸಾಧ್ಯವಾಗಬೇಕಾದರೆ ಜ್ಞಾನ, ವಿಜ್ಞಾನದ ಸೃಷ್ಟಿ ಕನ್ನಡದಲ್ಲೇ ಆಗಬೇಕು. ಭಾಷೆಯ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಂತಹ ವಾಣಿಜ್ಯ, ಆರ್ಥಿಕ ಸೌಲಭ್ಯಗಳು ಕನ್ನಡಕ್ಕೆ ಲಭ್ಯವಾಗಬೇಕು. ಕೃಷಿ, ಉದ್ಯಮ, ಉದ್ಯೋಗ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಗತಿಯೇ ರಾಜ್ಯದ ಅಭಿವೃದ್ಧಿಯಾಗಿದೆ. ಕನ್ನಡದ ಬೆಳವಣಿಗೆ ಸಹ ಇದೇ ಮಾದರಿಯಲ್ಲಿ ಸಾಗಬೇಕಿದೆ. ಕನ್ನಡ, ಸಂಸ್ಕೃತಿಪರ ಚಟುವಟಿಕೆಗಳಿಗೆ ನೀಡುತ್ತಿದ್ದ ಅನುದಾನವನ್ನು₹ 160 ಕೋಟಿಯಿಂದ ₹ 424 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

‘ಭಾರತದ ಒಕ್ಕೂಟ ತತ್ವವನ್ನು ಒಪ್ಪಿಕೊಂಡು ಕನ್ನಡದ ಅನನ್ಯತೆಯನ್ನು ಎತ್ತಿಹಿಡಿಯುವುದು ನಮ್ಮ ಕರ್ತವ್ಯ. ಆದುದರಿಂದಲೇ ನಮ್ಮ ನಾಡಿಗೆ ಒಂದು ನಾಡಗೀತೆ ಇರುವಂತೆ ನಾಡಧ್ವಜವೂ ಇರಬೇಕು. ನಾಡಗೀತೆ–ರಾಷ್ಟ್ರಗೀತೆ, ನಾಡಧ್ವಜ–ರಾಷ್ಟ್ರಧ್ವಜ ಪರಸ್ಪರ ಪೂರಕ. ಇವು ಒಂದಕ್ಕೊಂದು ವಿರೋಧಿಯಲ್ಲ. ಇದನ್ನು ವಿರೋಧಿಸುವುದು ನಾಡು–ನುಡಿಗೆ ತೋರುವ ಅಗೌರವವಾಗುತ್ತದೆ’ ಎಂದು ಹೊಸ ನಾಡಧ್ವಜದ ಬಗ್ಗೆ ವಿವಾದ ಸೃಷ್ಟಿಸುವವರನ್ನು ತರಾಟೆಗೆ ತೆಗೆದುಕೊಂಡರು.

ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವವರು, ಧರ್ಮದ್ರೋಹಿಗಳು, ಬಸವ ದ್ರೋಹಿಗಳು. ಕೋಮು ಸೌಹಾರ್ದದಂತೆ ಭಾಷಾ ಸೌಹಾರ್ದವೂ ಮುಖ್ಯ. ನಮ್ಮ ನಾಡಿಗೆ ಬಂದು ನೆಲೆಸಿರುವ, ನೆಲೆ ಕಂಡುಕೊಂಡಿರುವ ಅನ್ಯ ಭಾಷಿಕರು ಕನ್ನಡ ಕಲಿಯಲೇಬೇಕು ಎಂದು ಸಲಹೆ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶಭಕ್ತಿ, ಧರ್ಮ, ರಾಷ್ಟ್ರೀಯತೆ ಹೆಸರಿನಲ್ಲಿ ದಮನಮಾಡುವ ಪ್ರಯತ್ನ ನಡೆಯುತ್ತಿರುವುದನ್ನು ಖಂಡಿಸಿದರು.

‘ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯದ ವಿಷಯಗಳಿಗಷ್ಟೇ ಸೀಮಿತಗೊಳ್ಳದೆ ಕನ್ನಡಿಗರ ಬದುಕಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಚರ್ಚಿಸಬೇಕು. ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸುತ್ತದೆ. ನಾವು ಕನ್ನಡಿಗರಾದರೆ ಸಾಲದು, ನಮ್ಮ ಆಚಾರ, ವಿಚಾರ, ನಡವಳಿಕೆಗಳಿಂದಲೂ ಕನ್ನಡಿಗರಾಗಬೇಕು. ಭಾಷೆ ಬಳಕೆಯ ಮೂಲಕವೇ ಬೆಳೆಯಬೇಕು. ಕೀಳರಿಮೆ ಬಿಟ್ಟು ಕನ್ನಡ ಬಳಸಬೇಕು. ಕನ್ನಡದಲ್ಲೇ ವ್ಯವಹರಿಸಿ, ಕನ್ನಡ ಪತ್ರಿಕೆ, ಪುಸ್ತಕಗಳನ್ನು ಕೊಂಡು ಓದುತ್ತೇವೆ. ಇಂತಹ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲೂ ಬೆಳೆಸುತ್ತೇವೆ ಎಂದು ಪ್ರತಿಯೊಬ್ಬರ ಕನ್ನಡಿಗರೂ ಸಂಕಲ್ಪ ಮಾಡಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

ಕನ್ನಡ ಕಲಿಕೆ ಕಡ್ಡಾಯ

ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳೂ ಸೇರಿದಂತೆ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಭಾಷಾ ನೀತಿ ಜಾರಿಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಾಂಸ್ಕೃತಿಕ ನೀತಿಯನ್ನು ಅಂಗೀಕರಿಸಿದ್ದು, ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

Comments are closed.