ಕರ್ನಾಟಕ

ಇಂದಿರಾ ಕ್ಯಾಂಟಿನ್‌ ತೂಕ ವ್ಯತ್ಯಾಸ ತಡೆಯಲು ಕ್ರಮ: ಪ್ರತಿ ಪ್ಲೇಟ್‌ ಆಹಾರದ ಫೋಟೊ ತೆಗೆಯಬೇಕು

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾಗಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ನೀಡಲಾಗುವ ಆಹಾರಗಳ ಕುರಿತು ಹಲವಾರು ಮಂದಿ ಪ್ರಶ್ನೆಯೆತ್ತಿದ ಕೂಡಲೇ ಹೊಸ ಕ್ರಮಕ್ಕೆ ಮುಂದಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಪ್ಲಿಕೇಶನ್‌ವೊಂದನ್ನು ಅಭಿವೃದ್ಧಿ ಪಡಿಸುವ ಚಿಂತನೆ ನಡೆಸಿದೆ.

ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ವೇಳೆ ಸರಕಾರಿ ಪ್ರಾಯೋಜಿತ ಯಾವುದೇ ಕಾರ್ಯಕ್ರಮಗಳಲ್ಲಿ ಲೋಪಗಳು ಕಂಡು ಬಂದರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಹೀಗಾಗಿ ಇಂತಹ ಯಾವುದೇ ತೊಂದರೆಗಳಿಗೆ ಸಿಲುಕಬಾರದು ಎಂಬ ಕಾರಣಕ್ಕೆ ಬಿಬಿಎಂಪಿ ಹೊಸ ಅಪ್ಲಿಕೇಶನ್‌ ಅಭಿವೃದ್ಧಿ ಪಡಿಸಿದ್ದು ಈ ಮೂಲಕ ಕ್ಯಾಂಟೀನ್‌ನಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೆ ಕಣ್ಣಿಡಲು ಯೋಜನೆ ರೂಪಿಸಿದೆ.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರವನ್ನು ವಿತರಿಸುವ ಪ್ರತಿಯೊಬ್ಬ ವ್ಯಕ್ತಿಯೂ ವಿತರಣೆಗೂ ಮುನ್ನ ಪ್ರತೀ ಪ್ಲೇಟ್‌ನ ಚಿತ್ರ ತೆಗೆಯಬೇಕು, ಬಳಿಕ ತೂಕದ ಯಂತ್ರದಲ್ಲಿಟ್ಟು ನಿಗದಿ ಪಡಿಸಿದ ತೂಕವನ್ನಷ್ಟೇ ಪ್ಲೇಟ್‌ನಲ್ಲಿ ಬಡಿಸಬೇಕು. ಈ ಚಿತ್ರಗಳನ್ನೆಲ್ಲಾ ಈ ಮೊದಲೇ ಪ್ರತಿಯೊಂದು ಕ್ಯಾಂಟಿನ್‌ಗೆ ನೀಡಿರುವ ಕೋಡ್‌ಗಳೊಂದಿಗೆ ನಮೂದಿಸಿ ಚಿತ್ರಗಳನ್ನು ಅಪ್ಲೋಡ್‌ ಮಾಡಬೇಕು.

‘ ಈ ಅಪ್ಲಿಕೇಶನ್‌ ಅನ್ನು ಎಲ್ಲಾ ಕಮಿಷನರ್‌, ಮೇಯರ್‌, ಜಂಟಿ ಆಯುಕ್ತರು, ಕಾರ್ಪೊರೇಟರ್‌ಗಳು ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಕ್ಯಾಂಟಿನ್‌ನಲ್ಲಿ ನಡೆಯುವ ಚಟುವಟಿಕೆಯ ಮೇಲೆ ನಿಗಾ ಇಡಲು ನೆರವಾಗುತ್ತದೆ. ಇದನ್ನು ಸ್ಮಾರ್ಟ್‌ಫೋನ್‌ ಮೂಲಕವೇ ವೀಕ್ಷಿಸಬಹುದಾಗಿದೆ. ಅಲ್ಲದೇ ಈ ಎಲ್ಲಾ ವಿಚಾರಗಳು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನಲ್ಲೂ ವೀಕ್ಷಿಸಬಹುದಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮುಂದಿನ ತಿಂಗಳಲ್ಲಿ ನಾವು ಈ ಅಪ್ಲಿಕೇಶನ್‌ ಬಿಡುಗಡೆ ಮಾಡುತ್ತೇವೆ, ಇದರಲ್ಲಿ ಇಂದಿರಾ ಕ್ಯಾಂಟಿನ್‌ನಲ್ಲಿ ನಡೆಯುವ ಪ್ರತಿಯೊಂದು ಮಾಹಿತಿಯನ್ನು ಸಾರ್ವಜನಿಕರೂ ನೋಡಬಹುದಾಗಿದೆ. ಪ್ರತಿನಿತ್ಯ ಈ ಮಾಹಿತಿಯನ್ನು ನಾವು ಮಾಹಿತಿಯನ್ನು ಅಪ್ಡೇಟ್‌ ಮಾಡುತ್ತಲೇ ಇರುತ್ತೇವೆ’ ಎಂದು ನೋಡಾಲ್ ಅಧಿಕಾರಿ ತಿಳಿಸಿದ್ದಾರೆ.

Comments are closed.