ಮನೋರಂಜನೆ

ಪದ್ಮಾವತಿ: ಈಗ ಮೇವಾರ್‌ ರಾಜ ಕುಟುಂಬದ ಅಂಗಣಕ್ಕೆ ಚೆಂಡು

Pinterest LinkedIn Tumblr


ಹೊಸದಿಲ್ಲಿ: “ಒಂದೊಮ್ಮೆ ಆವಶ್ಯಕ ಬದಲಾವಣೆಗಳನ್ನು ಮಾಡಿದರೂ ಸಂಜಯ್‌ ಲೀಲಾ ಬನ್ಸಾಲಿ ಅವರ ವಿವಾದಿತ “ಪದ್ಮಾವತಿ’ ಚಿತ್ರವನ್ನು ಬಿಡುಗಡೆ ಮಾಡಲು ನಾವು ಎಷ್ಟು ಮಾತ್ರಕ್ಕೂ ಬಿಡೆವು” ಎಂಬ ತನ್ನ ಕಠಿನ ನಿಲುವನ್ನು ಶ್ರೀ ರಾಜಪೂತ ಕರಣಿ ಸೇನಾ ಈಗ ಕೊಂಚ ಮೆದುಗೊಳಿಸಿದೆ.

ತಾಜಾ ವರದಿಗಳ ಪ್ರಕಾರ ಕರಣಿ ಸೇನೆಯು “ಪದ್ಮಾವತಿ ಬಿಡುಗಡೆ ಕುರಿತ ನಿರ್ಧಾರವನ್ನು ನಾವೀಗ ಮೇವಾರ್‌ನ ರಾಜ ಕುಟುಂಬಕ್ಕೆ ಬಿಡುತ್ತಿದ್ದೇವೆ’ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

“ಒಂದೊಮ್ಮೆ ಮೇವಾರ್‌ ರಾಜ ಕುಟುಂಬಕ್ಕೆ ಪದ್ಮಾವತಿ ಚಿತ್ರದ ಬಗ್ಗೆ ಯಾವುದೇ ಆಕ್ಷೇಪ ಇಲ್ಲವೆಂದಾದರೆ ನಾವು ಚಿತ್ರದ ವಿರುದ್ಧದ ನಮ್ಮ ಪ್ರತಿಭಟನೆಯನ್ನು ಇಲ್ಲಿಗೇ ಕೊನೆಗೊಳಿಸುತ್ತೇವೆ. ಅಂತೆಯೇ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ಮತ್ತು ಶಾಹೀದ ಕಪೂರ್‌ ನಟನೆಯ ಪದ್ಮಾವತಿ ಚಿತ್ರ ಕಾಣುವುದಿದ್ದರೆ ಕಾಣಲಿ ಎಂದು ಹೇಳಬಯಸುತ್ತೇವೆ’ ಎಂಬುದಾಗಿ ಕರಣಿ ಸೇನೆ ಹೇಳಿದೆ ಎಂದು ವರದಿಗಳು ತಿಳಿಸಿವೆ.

ಮೇವಾರ್‌ ರಾಜ ಕುಟುಂಬ ಓರ್ವ ಸದಸ್ಯರಾಗಿರುವ ಅರವಿಂದ ಸಿಂಗ್‌ ಮೇವಾರ್‌ ಅವರು “ಪದ್ಮಾವತಿ ಚಿತ್ರ ನಿರ್ಮಾಪಕರು ಮತ್ತು ಪ್ರತಿಭಟನಕಾರರ ನಡುವೆ ಸಂಧಾನ ನಡೆಸಲು ನಾನು ಸಿದ್ಧನಿದ್ದೇನೆ’ ಎಂದು ಹೇಳಿರುವ ಹಿನ್ನೆಲೆಯಲ್ಲಿ ಕರಣಿ ಸೇನೆ ತನ್ನ ಕಠಿನ ನಿಲುವನ್ನು ಸಡಿಲುಗೊಳಿಸಿದೆ ಎಂದು ವರದಿಗಳು ಹೇಳಿವೆ.

ನಿನ್ನೆ ಬುಧವಾರವಷ್ಟೇ ಕರಣಿ ಸೇನೆಯ ಮುಖ್ಯಸ್ಥ ಲೋಕೇಂದ್ರ ಸಿಂಗ್‌ ಕಳವಿ ಅವರು “ಪದ್ಮಾವತಿ ಚಿತ್ರದಲ್ಲಿ ಆವಶ್ಯಕ ಬದಲಾವಣೆಗಳನ್ನು ಮಾಡಿದ ಹೊರತಾಗಿಯೂ ತಾನು ಅದರ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ’ ಎಂದು ಹೇಳಿದ್ದರು.

ಸೆನ್ಸಾರ್‌ ಮಂಡಳಿಯಿಂದ ಸರ್ಟಿಫಿಕೇಟ್‌ ದೊರಕಿದ ಬಳಿಕವೇ ತಾವು ಪದ್ಮಾವತಿ ಬಿಡುಗಡೆ ಕುರಿತು ನಿರ್ಧರಿಸುವುದಾಗಿ ಚಿತ್ರ ನಿರ್ಮಾಪಕರು ಹೇಳಿದ್ದರು.

ಈ ನಡುವೆ ಪದ್ಮಾವತಿ ಚಿತ್ರ ನಿರ್ಮಾಪಕರು ತಾವು ಡಿ.1ರಂದು ಪೂರ್ವ ನಿಗದಿಯಂತೆ ಲಂಡನ್‌ನಲ್ಲಿ ಚಿತ್ರ ಬಿಡುಗಡೆ ಮಾಡುವೆವು ಎಂದು ಹೇಳಿದ್ದರು. ಆದರೆ ಅನಂತರದಲ್ಲಿ ತಮ್ಮ ಹೇಳಿಕೆ ಬದಲಾಯಿಸಿ “ಪದ್ಮಾವತಿಗೆ ಸೆನ್ಸಾರ್‌ ಸರ್ಟಿಫಿಕೇಟ್‌ ದೊರೆಯದೆ ನಾವದನ್ನು ದೇಶ – ವಿದೇಶಗಳಲ್ಲಿ ಎಲ್ಲಿಯೂ ಬಿಡುಗಡೆ ಮಾಡುವುದಿಲ್ಲ’ ಎಂದು ಹೇಳಿದ್ದರು.

-ಉದಯವಾಣಿ

Comments are closed.