ಕರ್ನಾಟಕ

ವಿಧಾನಸಭೆಯಲ್ಲಿ ಜಾರ್ಜ್‌ ರಾಜಿನಾಮೆಗೆ ಬಿಜೆಪಿ ಪಟ್ಟು: ಎರಡನೇ ದಿನದ ಕಲಾಪವೂ ಬಲಿ

Pinterest LinkedIn Tumblr

ಬೆಳಗಾವಿ: ಡಿವೈಎಸ್ಪಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ರಾಜಿನಾಮೆ ನೀಡಬೇಕು ಎಂದು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರಿಂದಾಗಿ ಚಳಿಗಾಲದ ಅಧಿವೇಶನದ ಎರಡನೇ ದಿನದ ಕಲಾಪ ಬಲಿಯಾಯಿತು.

ನಿನ್ನೆ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಿದ ಬಳಿಕ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಕಲಾಪವನ್ನು ಇಂದಿಗೆ ಮುಂದೂಡಿದ್ದರು. ಇಂದು ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಜಾರ್ಜ್ ರಾಜಿನಾಮೆ ನೀಡಬೇಕು ಮತ್ತು ಈ ಸಂಬಂಧ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

ಪ್ರಶ್ನೋತ್ತರ ಅವಧಿ ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಸಚಿವ ಜಾರ್ಜ್ ರಾಜಿನಾಮೆ ಕೋರಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಬಲವಾದ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಪರ–ವಿರೋಧದ ಸಂಘರ್ಷ ನಡೆಯಿತು.

ಸಚಿವ ಸ್ಥಾನದಲ್ಲಿ ಮುಂದುವರೆಯುವ ಹಕ್ಕು ಜಾರ್ಜ್ ಅವರಿಗೆ ಇಲ್ಲ. ಒಂದು ವೇಳೆ ಅವರು ಸಚಿವ ಸ್ಥಾನದಲ್ಲಿ ಮುಂದುವರೆದರೆ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಇದೆ. ಹೀಗಾಗಿ ಸಿಬಿಐ ತನಿಖೆ ಮುಗಿಯುವವರೆಗೆ ಜಾರ್ಜ್ ಅಧಿಕಾರದಿಂದ ದೂರವಿರಲಿ ಎಂದು ಜಗದೀಶ್ ಶೆಟ್ಟರ್ ಅವರು ಆಗ್ರಹಿಸಿದರು. ಆದರೆ ಸ್ಪೀಕರ್ ಕೋಳಿವಾಡ್ ಅವರು ಬಿಜೆಪಿ ಮನವಿಯನ್ನು ತಿರಸ್ಕರಿಸಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಭೋಜನ ವಿರಾಮದ ಬಳಿಕ ಬಿಜೆಪಿ ಮಂಡಿಸಿದ ನಿಲುವಳಿ ಸೂಚನೆಯನ್ನು ಸ್ಪೀಕರ್ ಕೋಳಿವಾಡ್ ಅವರು ತಿರಸ್ಕರಿಸಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಮತ್ತೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಹೀಗಾಗಿ ಸ್ಪೀಕರ್ ಕಲಾಪವನ್ನು ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿದ್ದಾರೆ.

ಡಿವೈಎಸ್‌ಪಿ ಎಂ.ಕೆ.ಗಣಪತಿ ಸಾವು ಪ್ರಕರಣದಲ್ಲಿ ಸಚಿವ ಜಾರ್ಜ್‌ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದ್ದುಸ ಅವರನ್ನು ಒಂದನೇ ಆರೋಪಿ ಎಂದು ಹೆಸರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂ.1 ಆರೋಪಿ ರಕ್ಷಣೆಗೆ ನಿಂತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದ್ದಾರೆ.

Comments are closed.