ಕರ್ನಾಟಕ

BJP ಪರಿವರ್ತನಾ ಯಾತ್ರೆ; ಖಾಲಿ, ಖಾಲಿ ಕುರ್ಚಿ ಕಂಡು ಶಾ ಆಕ್ರೋಶ

Pinterest LinkedIn Tumblr


ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟದ ರಣಕಹಳೆ ಮೊಳಗಿಸಿರುವ ರಾಜ್ಯ ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗುರುವಾರ ಚಾಲನೆ ನೀಡಿದರು. ಜನವರಿ 28ರವರೆಗೆ ಈ ಯಾತ್ರೆ 224 ಕ್ಷೇತ್ರಗಳಲ್ಲಿ ನಡೆಯಲಿದೆ.

ಖಾಲಿ, ಖಾಲಿ ಕುರ್ಚಿ ಕಂಡು ಶಾ, ಗೋಯಲ್ ಗರಂ:

ತುಮಕೂರು ರಸ್ತೆಯಲ್ಲಿ ಆಯೋಜಿಸಿದ್ದ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಸಮಾರಂಭದಲ್ಲಿನ ಅವ್ಯವಸ್ಥೆಗೆ ಅಮಿತ್ ಶಾ ಹಾಗೂ ರಾಜ್ಯ ಸಹ ಉಸ್ತುವಾರಿ ಪಿಯೂಶ್ ಗೋಯಲ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಸಮಾರಂಭದಲ್ಲಿ ಖಾಲಿ, ಖಾಲಿ ಕುರ್ಚಿಗಳು ಇರುವುದನ್ನು ಕಂಡ ಶಾ ಅವರು ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಏತನ್ಮಧ್ಯೆ ಖಾಲಿ, ಖಾಲಿ ಕುರ್ಚಿಗಳನ್ನು ಕಂಡ ಪಿಯೂಶ್ ಗೋಯಲ್ ಅವರು ವೇದಿಕೆ ಮೇಲೆ ನಿಂತಿದ್ದವರನ್ನು ಕೆಳಗೆ ಕುರ್ಚಿಯಲ್ಲಿ ಕುಳ್ಳಿರಿಸುವಂತೆ ಸೂಚಿಸಿದ್ದರು. ಆದರೆ ರಾಜ್ಯ ಬಿಜೆಪಿ ನಾಯಕರು ಮೌನವಾಗಿದ್ದದನ್ನು ಕಂಡ ಗೋಯಲ್ ಅವರು ತಾವೇ ಖುದ್ದಾಗಿ ವೇದಿಕೆ ಮೇಲಿದ್ದವರನ್ನು ಕೆಳಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಹೋಗಲು ಮನವಿ ಮಾಡುತ್ತಿದ್ದುದನ್ನು ಕಂಡು ರಾಜ್ಯ ಬಿಜೆಪಿ ನಾಯಕರು ವೇದಿಕೆಯಿಂದ ಕೆಳಗೆ ಹೋಗಿ, ಕಾರ್ಯಕರ್ತರಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿಕೊಂಡರು.

ಟ್ರಾಫಿಕ್ ಜಾಮ್ ಆಗಿರುವುದಕ್ಕೆ ಅಸಮಾಧಾನಗೊಂಡಿದ್ದ ಶಾ ಅವರು ಮೊಬೈಲ್ ಕರೆ ಮಾಡಿ ಬಿಎಸ್ ವೈ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರೆನ್ನಲಾಗಿದೆ. ಶಾ ಟ್ರಾಫಿಕ್ ಜಾಮ್ ನಿಂದಾಗಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸುವಂತಾಗಿತ್ತು.

-ಉದಯವಾಣಿ

Comments are closed.