ಕರ್ನಾಟಕ

ಮಾಂಸ ತಿಂದು ದೇಗುಲ ಪ್ರವೇಶಿಸಿದ ಸಿದ್ದರಾಮಯ್ಯ ಪರ ನಿಂತ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್‌

Pinterest LinkedIn Tumblr

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನು ಸೇವಿಸಿ ಧರ್ಮಸ್ಥಳದ ಮಂಜುನಾಥ ದೇಗುಲ ಪ್ರವೇಶಿಸಿರುವುದರಲ್ಲಿ ಆಶ್ಚರ್ಯ ಏನೂ ಇಲ್ಲ. ಅವರು ಮಾಂಸ ತಿಂದು ಅಥವಾ ಕೊರಳಿಗೆ ನೇತು ಹಾಕಿಕೊಂಡು ದೇಗುಲ ಪ್ರವೇಶಿಸಲಿ. ಅದು ಅವರ ವೈಯುಕ್ತಿಕ ವಿಚಾರ. ಅದರ ಬಗ್ಗೆ ಜನತೆಯಾಗಲಿ, ದೇವರಾಗಲಿ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಬಿಜೆಪಿ ರಾಜ್ಯ ವಕ್ತಾರರಾದ ತೇಜಸ್ವಿನಿ ರಮೇಶ್‌ ಹೇಳಿದರು

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ದೈವಭಕ್ತರಲ್ಲ. ಅವರು ನಮ್ಮ ಪರಂಪರೆ, ಆಚರಣೆ, ಧರ್ಮದ ವಿರೋಧಿ. ಮೈಸೂರು ಅರಮನೆ, ರಾಜವಂಶಸ್ಥರ ವಿರುದ್ಧ ಸತತವಾಗಿ ಹೋರಾಟ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ, ದೇವರು, ಹಿಂದೂ ಧರ್ಮ ಅವಹೇಳನ ಮಾಡುವ ಕೆ.ಎಸ್‌.ಭಗವಾನ್‌ ಅಂಥವರ ಪರವಾದ ನಿಲುವುಗಳನ್ನು ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ. ಹೀಗಾಗಿ, ಅವರ ನಡೆನುಡಿ ಆಶ್ಚರ್ಯ ಎನಿಸುವುದಿಲ್ಲ’ ಎಂದರು.

‘ಟಿಪ್ಪು ಅವರೊಬ್ಬ ಮತಾಂಧರಾಗಿದ್ದರು. ಅವರು ನಮ್ಮ ಸಂಸ್ಕೃತಿ, ನಾಗರಿಕತೆ ನಾಶ ಮಾಡಿದ್ದು ನಿಜ. ಹೀಗಾಗಿ, ಅವರ ಜಯಂತ್ಯುತ್ಸವ ಆಚರಿಸುವ ಅಗತ್ಯವಿಲ್ಲ ಎಂಬುದು ನಮ್ಮ ನಿಲುವು’ ಎಂದು ಹೇಳಿದರು.

‘ಟಿಪ್ಪು ಕೊಡಗಿನ ಕೊಡವರು, ಮಂಗಳೂರಿನ ನೆತ್ತರಕೆರೆಯ ಕ್ರಿಶ್ಚಿಯನ್ನರ ಮಾರಣಹೋಮ ಮಾಡಿದ್ದರು. ಟಿಪ್ಪು ಜಯಂತ್ಯುತ್ಸವ ಆಚರಣೆಗೆ ಕೊಡವರು, ಮಂಗಳೂರಿನ ಕ್ರಿಶ್ಚಿಯನ್ನರು ವಿರೋಧ ವ್ಯಕ್ತಪಡಿಸಿದ್ದಾರೆ. ಆ ಜನರಿಗೆ ನೋವು ಉಂಟು ಮಾಡುವಂಥ ಆಚರಣೆ ಮಾಡಿ, ಅವರ ಗಾಯಗಳ ಮೇಲೆ ಮತ್ತಷ್ಟು ಬರೆ ಎಳೆಯುವ ಅಗತ್ಯ ಇಲ್ಲ’ ಎಂದರು.

Comments are closed.